ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ದಂಪತಿ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೆಗೆದು ಹಾಕಿದ್ದಾರೆ.
ಗುನಾದಲ್ಲಿ ಕಾಲೇಜು ನಿರ್ಮಾಣಕ್ಕೆ ಜಗನ್ ಪುರ ಚೌಕ್ ಪ್ರದೇಶದಲ್ಲಿ 20 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈ ಜಾಗದಲ್ಲಿ ರಾಜಕುಮಾರ್ ಅಹಿರ್ವಾರ್ ಮತ್ತು ಅವರ ಪತ್ನಿ ಅನೇಕ ವರ್ಷಗಳಿಂದ ಕೃಷಿ ಮಾಡುತ್ತಿದ್ದರು.
ಮಂಗಳವಾರ ಸ್ಥಳೀಯ ಆಡಳಿತ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಲು ಜೆಸಿಬಿಯೊಂದಿಗೆ ತೆರಳಿ ಹೊಲದಲ್ಲಿ ಬೆಳೆಗಳಿಗೆ ಹಾನಿ ಮಾಡಿದ್ದಾರೆ. ಇದನ್ನು ನಿಲ್ಲಿಸುವಂತೆ ರಾಜಕುಮಾರ್ ದಂಪತಿ ಮನವಿ ಮಾಡಿದರೂ ಅಧಿಕಾರಿಗಳು ಕೇಳಿಲ್ಲ. ಪೊಲೀಸರು ದೌರ್ಜನ್ಯ ನಡೆಸಿದಾಗ ಕ್ರಿಮಿನಾಶಕ ಸೇವಿಸಿದ್ದಾರೆ. ಕ್ರಿಮಿನಾಶಕ ಸೇವಿಸಿದ ದಂಪತಿ ಆಸ್ಪತ್ರೆಗೆ ಹೋಗಲು ನಿರಾಕರಿಸಿದಾಗ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಪೊಲೀಸರು ಇಬ್ಬರನ್ನು ಥಳಿಸಿದ್ದಾರೆ.
ಪತಿಯಿಂದ ದೂರವಿರುವಂತೆ ಪತ್ನಿಗೆ ತಾಕೀತು ಮಾಡಿದ ಮಹಿಳಾ ಪೊಲೀಸ್, ರಾಜಕುಮಾರ್ ಪತ್ನಿ ಸೀರೆಯನ್ನು ಕಿತ್ತು ಹಾಕಿದ್ದಾರೆ. ಮಕ್ಕಳ ಎದುರಲ್ಲೇ ಅಮಾನವೀಯವಾಗಿ ದಂಪತಿ ಥಳಿಸಿದ ವಿಡಿಯೋ ವೈರಲ್ ಆಗಿದೆ. ಘಟನೆ ಗಮನಕ್ಕೆ ಬರುತ್ತಲೇ ಕ್ರಮಕೈಗೊಂಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಗುನಾ ಕಲೆಕ್ಟರ್ ಮತ್ತು ಪೊಲೀಸ್ ಅಧೀಕ್ಷಕರನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.