ಮುಂಬೈ: ಖ್ಯಾತ ನಟಿ ಶಬಾನಾ ಅಜ್ಮಿ ಬಡವರ ಪರವಾಗಿ ಸದಾ ನಿಲ್ಲುತ್ತಾರೆ. ತಮ್ಮ ಜಾಲತಾಣ ಖಾತೆಗಳಲ್ಲಿ ಅವರು ಸೌಲಭ್ಯ ವಂಚಿತ ತಾಯಂದಿರ ಬಗ್ಗೆ ಗೌರವದ ಸಂದೇಶಗಳನ್ನು ಹಾಕುತ್ತಿರುತ್ತಾರೆ.
ಕಾರ್ಮಿಕ ಮಹಿಳೆಯೊಬ್ಬಳು ವರ್ಷ ಪೂರೈಸದ ತನ್ನ ಮಗುವನ್ನು ಜೋಳಿಗೆಯಲ್ಲಿ ಬೆನ್ನಿಗೆ ಕಟ್ಟಿಕೊಂಡು ತಲೆಯ ಮೇಲೆ ಇಟ್ಟಿಗೆ ಹೊರುವ ಫೋಟೋವನ್ನು “ಮಾ ತುಝೆ ಸಲಾಂ” ಎಂಬ ಕ್ಯಾಪ್ಶನ್ ನೊಂದಿಗೆ ಅವರು ಬುಧವಾರ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ನೆಟ್ಟಿಗರು ಫೋಟೋಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದು, “ಬಡತನ ಆಕೆ ಎರಡೂ ಕೆಲಸವನ್ನು ಒಟ್ಟಿಗೆ ಮಾಡುವಂತೆ ಮಾಡಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಅರ್ಧ ಬಟ್ಟಲು ಅನ್ನಕ್ಕಾಗಿ ನಮ್ಮ ಲಕ್ಷಾಂತರ ಅಣ್ಣ, ತಂಗಿಯರು ತುಂಬಾ ಕಷ್ಟದ ಜೀವನ ಜೀವಿಸುತ್ತಿದ್ದಾರೆ” ಎಂದು ಇನ್ನೊಬ್ಬರು ಬರೆದಿದ್ದಾರೆ. “ಬಡವರ ಪರವಾಗಿ ದೇಶವಿಲ್ಲ” ಎಂದು ಮತ್ತೊಬ್ಬರು ಬರೆದಿದ್ದಾರೆ.
ಶಬಾನಾ ಅವರು ತಮ್ಮ ತಂದೆ ಪ್ರಾರಂಭಿಸಿದ್ದ, ಉರ್ದು ಕವಿ ಕೈಫ್ ಅಜ್ಮಿ ಅವರು ನವೀಕರಿಸಿದ ಮಿಜ್ವಾನ್ ಎಂಬ ಸ್ವಯಂ ಸೇವಾ ಸಂಸ್ಥೆಯ ಮೂಲಕ ಕೋವಿಡ್ 19 ಸಂದರ್ಭದಲ್ಲಿ ಬಡವರಿಗೆ ನೆರವಾಗಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ದಿನಗೂಲಿ ನೌಕರರರಿಗೆ ಸಂಸ್ಥೆ ನೆರವು ನೀಡಿತ್ತು. ಹಲವರಿಗೆ ಮಾಸ್ಕ್ ವಿತರಿಸಿತ್ತು.
ಅಜ್ಮಿ ಅವರು 2014 ರಲ್ಲಿ ಮುಂಬೈ ಮಹಾನಗರ ಪಾಲಿಕೆ ಸ್ಲಂ ಏರಿಯಾಗಳನ್ನು ಖಾಲಿ ಮಾಡಿಸಲು ಮುಂದಾದಾಗ ಪ್ರತಿಭಟನೆ ಮಾಡಿದ್ದರು. ಜೈಲು ಪಾಲಾಗಿದ್ದರು. ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಆನಂದ ಪಟವರ್ಧನ ಹಾಗೂ ಲೀಮಾ ಸಿಂಘಾಲ್ ಅವರೂ ಜತೆಯಾಗಿದ್ದರು. ಅಜ್ಮಿ ಅವರ ತಾಯಿ – ತಂದೆ ಕೂಡ ಹೋರಾಟಗಳಲ್ಲಿ ಭಾಗವಹಿಸಿದ್ದರು.