
ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗದೇ ಹೈರಾಣಾಗಿರುವ ಲಖನೌ ನಿವಾಸಿಯೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಆಶುತೋಶ್ ಸಿಂಗ್ ಹೆಸರಿನ ಈ ವ್ಯಕ್ತಿ ಬಾರ್ಬೆಕ್ಯೂ ಗ್ರಿಲ್ ಒಂದನ್ನು ಸ್ಥಾಪಿಸಿ ಕಲ್ಲಿದ್ದಲಿನ ಬದಲಿಗೆ ತ್ಯಾಜ್ಯವನ್ನೇ ಇಂಧನದ ರೂಪದಲ್ಲಿ ಬಳಸಿಕೊಂಡಿದ್ದಾರೆ.
ಲಖನೌದ ಇಂದಿರಾ ನಗರದ ಪ್ರದೇಶದಲ್ಲಿ ಕಸದ ರಾಶಿ ಬೆಟ್ಟದಂತೆ ಬೆಳೆದರೂ ಸಹ ಪಾಲಿಕೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸದೇ ಇದ್ದ ಕಾರಣದಿಂದ ಬೇಸತ್ತು ಹೋಗಿದ್ದರು ಆಶುತೋಶ್. ಬಾರ್ಬೆಕ್ಯೂ ಹಾಕಿಕೊಂಡು ಅದರ ಮೇಲೆ ಚೀಸ್ ಹಾಗೂ ತರಕಾರಿ ಬೇಯಿಸಿಕೊಂಡು, ಚಹಾ ಮಾಡಿ ಸ್ನೇಹಿತರಿಗೆ ಹಂಚಿದ್ದಾರೆ ಆಶುತೋಶ್.
ಆಶುತೋಶ್‌ಗೆ ಬೆಂಬಲ ಕೊಟ್ಟ ಸ್ಥಳೀಯ ಮಂದಿ, ಪಾಲಿಕೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇದೇ ರೀತಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಪಾಲಿಕೆಯ ವಲಯಾಧಿಕಾರಿ ವಿದ್ಯಾ ಸಾಗರ್ ಯಾದವ್, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.