ಕೇಂದ್ರ ಸರ್ಕಾರಿ ನೌಕರರಿಗೆ 10 ಸಾವಿರ ರೂಪಾಯಿ ಹಬ್ಬದ ಮುಂಗಡ ನೀಡಲು ಮತ್ತು ಎಲ್.ಟಿ.ಸಿ. ಬದಲಿಗೆ ನಗದು ವೋಚರ್ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಋತುವಿನಲ್ಲಿ ನಗದು ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ. 10 ಸಾವಿರ ರೂಪಾಯಿ ಬಡ್ಡಿರಹಿತ ಹಬ್ಬದ ಮುಂಗಡ ನೀಡಲಾಗುವುದು ಎಂದು ಹೇಳಿದ್ದಾರೆ.
ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂಪಾಯಿ ಮುಂಗಡ ದೊರೆಯಲಿದ್ದು, 2021 ರ ಮಾರ್ಚ್ ವರೆಗೂ ಇದನ್ನು ಬಳಸಿಕೊಳ್ಳಬಹುದಾಗಿದೆ. ಈ ಹಣವನ್ನು 10 ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಕೇಂದ್ರ ಸರ್ಕಾರ ಇದಕ್ಕಾಗಿ 4 ಸಾವಿರ ಕೋಟಿ ರೂ. ಕಾಯ್ದಿರಿಸಿದೆ ಎಂದು ತಿಳಿಸಿದ್ದಾರೆ.
ನೌಕರರಿಗೆ ಪ್ರತಿ 4 ವರ್ಷಗಳಿಗೆ ನೀಡುವ ಎಲ್.ಟಿ.ಸಿ. ಬದಲಾಗಿ ಈ ಸಲ ನಗದು ವೋಚರ್ ನೀಡಲಾಗುವುದು. ಕೇಂದ್ರ ಸರ್ಕಾರಿ ಉದ್ಯೋಗಿಗಳು ಪ್ರವಾಸಕ್ಕೆ, ಒಂದು ಸಲ ತಮ್ಮ ಊರಿಗೆ ತೆರಳುವ ಸಂದರ್ಭದಲ್ಲಿ ಎಲ್.ಟಿ.ಸಿ. ರೂಪದಲ್ಲಿ ಹಣ ಪಡೆಯಬಹುದಾಗಿತ್ತು. ಈ ಸಲ ಕೊರೋನಾ ಕಾರಣದಿಂದ ಎಲ್.ಟಿ.ಸಿ. ಬದಲಿಗೆ ನಗದು ವೋಚರ್ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.