ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಜನತೆಯ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ಕಾರಣ ಆರ್ಥಿಕವಾಗಿ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ. ಇದೀಗ ಲಾಕ್ಡೌನ್ ಸಡಿಲಿಕೆಯಾಗಿದ್ದು ವ್ಯಾಪಾರ ವಹಿವಾಟುಗಳು ಆರಂಭವಾಗಿದ್ದರೂ ಸಹ ಯಥಾಸ್ಥಿತಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಇದರ ಮಧ್ಯೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದರ ಜೊತೆಗೆ ಕಳೆದ ಮೂರು ತಿಂಗಳಿನಿಂದ ಎಲ್.ಪಿ.ಜಿ. ಬಳಕೆದಾರರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವನ್ನು ಪಾವತಿಸಿಲ್ಲವೆಂದು ಹೇಳಲಾಗಿದ್ದು, ಇದರಿಂದಾಗಿ ಮಧ್ಯಮ ಹಾಗೂ ಬಡ ವರ್ಗದ ಜನತೆ ಕಂಗೆಡುವಂತಾಗಿದೆ. ಓರ್ವ ಎಲ್.ಪಿ.ಜಿ. ಬಳಕೆದಾರರಿಗೆ ವಾರ್ಷಿಕವಾಗಿ 12 ಸಿಲಿಂಡರ್ಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದು, ಅದಕ್ಕೆ ಮೇಲ್ಪಟ್ಟ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತವಾಗಿ ಖರೀದಿಸಬೇಕಾಗುತ್ತದೆ.
ಈ ಮೊದಲು ಸಬ್ಸಿಡಿಯನ್ನು ಕಡಿತ ಮಾಡಿ ಬಳಕೆದಾರರು ಸಿಲಿಂಡರ್ ದರವನ್ನು ಪಾವತಿಸಬೇಕಾಗಿತ್ತು. ಬಳಿಕ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ಸಿಲಿಂಡರ್ ಖರೀದಿ ವೇಳೆ ಗ್ರಾಹಕರು ಪೂರ್ಣ ಪ್ರಮಾಣದ ಹಣ ಪಾವತಿಸಿದ ಬಳಿಕ ಸಬ್ಸಿಡಿ ಹಣ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಸಬ್ಸಿಡಿ ಹಣ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲವೆನ್ನಲಾಗಿದ್ದು, ಕೊರೊನಾ ಸಂಕಷ್ಟದ ನಡುವೆ ಸಾರ್ವಜನಿಕರಿಗೆ ಇದು ಮತ್ತೊಂದು ಹೊರೆಯಾಗಿದೆ.
ಕೆಲವೊಂದು ಮೂಲಗಳ ಪ್ರಕಾರ ಸಿಲಿಂಡರ್ ಬೆಲೆ ಈಗ ಅತ್ಯಂತ ಕಡಿಮೆಯಾಗಿದ್ದು, ಗೃಹ ಬಳಕೆಯ 14.5 ಕೆ.ಜಿ. ತೂಕದ ಸಿಲಿಂಡರ್ ಬೆಲೆ 607 ರೂಪಾಯಿಗಳಾಗಿದೆ (ಸಾಗಣೆ ವೆಚ್ಚ ಬಿಟ್ಟು). ಹೀಗಾಗಿ ಸಬ್ಸಿಡಿ ಪಾವತಿಸಲಾಗುತ್ತಿಲ್ಲವೆನ್ನಲಾಗಿದೆ. ಆದರೆ ಸಿಲಿಂಡರ್ ಬಳಕೆದಾರರು ದುಬಾರಿ ಬೆಲೆಯಾಗಿದ್ದಾಗ ನಾವುಗಳು ಆ ಹಣವನ್ನು ಪಾವತಿಸಿ ಸಿಲಿಂಡರ್ ಪಡೆದುಕೊಂಡಿದ್ದೇವೆ. ಈಗ ಸಿಲಿಂಡರ್ ಬೆಲೆ ಕಡಿಮೆಯಾಗಿದ್ದರೂ ಅದಕ್ಕೆ ಸಬ್ಸಿಡಿ ಪಾವತಿಸುವ ಮೂಲಕ ಬಡ ಜನತೆಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಮನವಿ ಕೇಳಿ ಬರುತ್ತಿದೆ.