ಕೋವಿಡ್ 19ನಿಂದಾಗಿ ಆರೋಗ್ಯ ಸಿಬ್ಬಂದಿ ಮೊದಲಿಗಿಂತಲೂ ಹೆಚ್ಚು ಶ್ರಮ ವಹಿಸಿ ದುಡಿಯುವಂತಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ರೋಗಿಗಳ ದೈಹಿಕ ಆರೋಗ್ಯವನ್ನ ಕಾಪಾಡೋದ್ರ ಜೊತೆಗೆ ಅವರ ಮಾನಸಿಕ ಸ್ಥೈರ ಕೂಡ ಕುಗ್ಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ವೈದ್ಯಕೀಯ ಸಿಬ್ಬಂದಿ ಮೇಲಿದೆ.
ಈಗಾಗಲೇ ಪಿಪಿಇ ಕಿಟ್ ಧರಿಸಿದ ವೈದ್ಯರು ಹಾಗೂ ನರ್ಸ್ ರೋಗಿಗಳನ್ನ ಹುರಿದುಂಬಿಸಲು ನೃತ್ಯ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ರೀತಿಯ ಇನ್ನೊಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ.
ಈ ವಿಡಿಯೋದಲ್ಲಿ ವೈದ್ಯಕೀಯ ಸಿಬ್ಬಂದಿ ನೃತ್ಯ ಮಾಡುತ್ತಿಲ್ಲ. ಆದರೆ ಕೋವಿಡ್ ಸೋಂಕಿತೆಯನ್ನ ಹುರಿದುಂಬಿಸಲು ಹಾಡನ್ನ ನುಡಿಸಲಾಗಿದೆ.
ಡಾ. ಮೋನಿಕಾ ಲಾಂಗೆ ಎಂಬವರು ಶೇರ್ ಮಾಡಿದ ವಿಡಿಯೋದಲ್ಲಿ ರೋಗಿಯನ್ನ ಹುರಿದುಂಬಿಸಲು ಲವ್ ಯು ಜಿಂದಗಿ ಎಂಬ ಹಿಂದಿ ಸಿನಿಮಾದ ಹಾಡನ್ನ ಪ್ಲೇ ಮಾಡಲಾಗಿದೆ.
ಈಕೆ 30 ವರ್ಷದ ಮಹಿಳೆಯಾಗಿದ್ದು ವೈದ್ಯಕೀಯ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿದ್ದಾರೆ. ಇವರಿಗೆ ಐಸಿಯು ಸಿಗದೇ ಇದ್ದ ಕಾರಣ ಕೊರೊನಾ ತುರ್ತು ನಿಗಾ ವಾರ್ಡ್ನಲ್ಲೇ ಚಿಕಿತ್ಸೆ ನೀಡಲಾಗ್ತಿದೆ.
ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಈ ಮಹಿಳೆ ರೆಮಿಡಿಸಿವರ್ ಹಾಗೂ ಪ್ಲಾಸ್ಮಾ ಚಿಕಿತ್ಸೆಗಳನ್ನ ನೀಡಲಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿಯೂ ಈ ಮಹಿಳೆಯು ಧೈರ್ಯಗೆಡದೇ ಇರೋದೇ ಚಿಕಿತ್ಸೆ ಫಲಕಾರಿಯಾಗಲು ಮುಖ್ಯ ಕಾರಣವಾಗಿದೆ.
ಆಕೆ ನಿಜಕ್ಕೂ ಗಟ್ಟಿಗಿತ್ತಿ. ಆಕೆ ನನ್ನ ಬಳಿ ಬಂದು ನನಗಾಗಿ ಹಾಡನ್ನ ಹಾಕುವಿರಾ ಎಂದು ಕೇಳಿದಳು. ನಾನು ಸಹ ಇದಕ್ಕೆ ಅನುಮತಿ ನೀಡಿದೆ. ಇದರಿಂದ ನಾವು ತಿಳಿಯಬೇಕಾದ ಪಾಠ ಏನೆಂದರೆ ಎಂದಿಗೂ ಭರವಸೆಯನ್ನ ಬಿಡಬೇಡಿ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸೋಂಕಿತೆಯ ಆತ್ಮಸ್ಥೈರ್ಯ ಹಾಗೂ ವೈದ್ಯಕೀಯ ಸಿಬ್ಬಂದಿಯ ಬೆಂಬಲಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.