21 ವರ್ಷದ ಯುವತಿಯೊಬ್ಬರು ತಮ್ಮ ಮನೆ ಬಿಟ್ಟು ಮುಸ್ಲಿಂ ಯುವಕನನ್ನು ಮದುವೆಯಾಗಿ, ಮತಾಂತರಗೊಂಡ ತಿಂಗಳ ಬಳಿಕ ಉತ್ತರ ಪ್ರದೇಶದ ಎಟಾದ ಪೊಲೀಸರು ಆಕೆಯ ಪತಿಯ ಇಡಿ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನೂತನವಾಗಿ ಜಾರಿಗೆ ಬಂದಿರುವ ಮತಾಂತರ ವಿರೋಧಿ ಕಾನೂನಿನ ಅಡಿ ಈ ಕುಟುಂಬದ ಆರು ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ. ಮದುವೆಯಾಗಿದ್ದ 25 ವರ್ಷದ ಜಾವೇದ್ ಹಾಗೂ ಆತನ ಕುಟುಂಬದ 10 ಮಂದಿ ವಿರುದ್ಧ ಇಲ್ಲಿನ ಜಲೇಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರಲ್ಲಿ ಜಾವೇದ್‌ನ ದೂರದ ಸಂಬಂಧಿಗಳೂ ಇದ್ದು, ಅವರೆಲ್ಲಾ ಆಪಾದಿತನೊಂದಿಗೆ ಸಂಪರ್ಕದಲ್ಲಿ ಇದ್ದರೆಂದು ಪೊಲೀಸರು ಹೇಳಿದ್ದಾರೆ.
ಜಾವೇದ್ ಹಾಗೂ ಆತನ ನಾಲ್ವರು ಸಂಬಂಧಿಕರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಅವರ ಸುಳಿವು ಕೊಟ್ಟವರಿಗೆ ತಲಾ 25 ಸಾವಿರ ರೂ.ಗಳ ಬಹುಮಾನ ಘೋಷಿಸಲಾಗಿದೆ.
ದೆಹಲಿಯ ವಕೀಲರೊಬ್ಬರು ಯುವತಿಯ ತಂದೆಗೆ ಪತ್ರವೊಂದನ್ನು ಕಳುಹಿಸಿ, ಆಕೆಯ ಮತಾಂತರ ಹಾಗೂ ವಿವಾಹದ ಕುರಿತಂತೆ ಮಾಹಿತಿ ಕೊಟ್ಟ ಬಳಿಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಯುವತಿಯು ನವೆಂಬರ್ 17ರಿಂದ ನಾಪತ್ತೆಯಾಗಿದ್ದರೂ ಸಹ ದೂರು ದಾಖಲಿಸಲು ಇಷ್ಟು ಸಮಯ ಹಿಡಿದಿದೆ.
“ಆಪಾದಿತರ ವಿರುದ್ಧ ಐಪಿಸಿ ಸೆಕ್ಷನ್ 366 ಹಾಗೂ ಉತ್ತರ ಪ್ರದೇಶದ ಅಕ್ರಮ ಮತಾಂತರ ಕಾಯಿದೆ ಅಡಿ ಆರು ಮಂದಿಯನ್ನು ಬಂಧಿಸಲಾಗಿದೆ” ಎಂದು ಡಿಎಸ್‌ಪಿ ರಾಮ್ ನಿವಾಸ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಜಾವೇದ್‌ನ ಬಂಧುಗಳನ್ನು ಕೋರ್ಟ್ ಆದೇಶದ ಮೇರೆಗೆ ಜೈಲಿಗೆ ಕಳುಹಿಸಲಾಗಿದ್ದು, ಮಿಕ್ಕವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಸ್ಟೇಷನ್ ಅಧಿಕಾರಿ ಕೃಷ್ಣ ಪಾಲ್ ಸಿಂಗ್ ತಿಳಿಸಿದ್ದಾರೆ.