ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದೆ ಮಹತ್ವದ ತೀರ್ಪು ಹೊರ ಬಿದ್ದಿದೆ. ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಎಲ್.ಕೆ. ಅಡ್ವಾಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅಡ್ವಾಣಿಯವರನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ. ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆ ಮಾಡಿದೆ. ಬಾಬರಿ ಮಸೀದಿ ಧ್ವಂಸ ಅಚಾನಕ್ ಘಟನೆಯೆಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದು ಪೂರ್ವ ನಿಯೋಜಿತ ಘಟನೆಯಲ್ಲವೆಂದು ಎಸ್.ಕೆ. ಯಾದವ್ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಸಾಕ್ಷ್ಯವಿಲ್ಲವೆಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಅಲಹಾಬಾದ್ ಕೋರ್ಟ್ ತೀರ್ಪನ್ನು ಸಿಬಿಐ ಕೋರ್ಟ್ ಎತ್ತಿ ಹಿಡಿದಿದೆ. 2 ಸಾವಿರ ಪುಟಗಳ ತೀರ್ಪನ್ನು ಪ್ರಕಟಿಸಲಾಗಿದೆ. ನ್ಯಾಯಮೂರ್ತಿಯಾದ ಎಸ್.ಕೆ. ಯಾದವ್ ತೀರ್ಪನ್ನು ಪ್ರಕಟಿಸಿದ್ದಾರೆ.
28 ವರ್ಷಗಳ ಸುದೀರ್ಘ ಅವಧಿಯ ನಂತರ ಇವತ್ತು ತೀರ್ಪು ಪ್ರಕಟವಾಗಿದೆ. ಪ್ರಕರಣದಲ್ಲಿ ಆರೋಪಿತರಾದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಕೋರ್ಟ್ ಗೆ ಖುದ್ದು ಹಾಜರಾಗಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಇವರು ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದರು. 26 ಮಂದಿ ಕೋರ್ಟ್ ಮುಂದೆ ಹಾಜರಾಗಿದ್ದರು.
ಈ ಪ್ರಕರಣದಲ್ಲಿ 49 ಮಂದಿ ಆರೋಪಿತರಿದ್ದು, ವಿಚಾರಣೆ ಹಂತದಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಅಯೋಧ್ಯೆಯ ರಾಮಮಂದಿರ ಇದ್ದ ಜಾಗದಲ್ಲಿ ಬಾಬರಿ ಮಸೀದಿ ನಿರ್ಮಿಸಲಾಗಿದೆ ಎಂದು 1992ರ ಡಿಸೆಂಬರ್ 6ರಂದು ಕರಸೇವಕರು ಮಸೀದಿಯನ್ನು ಧ್ವಂಸ ಮಾಡಿದ್ದರು.
ತೀರ್ಪು ನೋಡಿ ಅಡ್ವಾಣಿ ಭಾವುಕರಾಗಿದ್ದಾರೆ. ಟಿವಿ ಮುಂದೆ ಕೈ ಮುಗಿದು ಅಡ್ವಾಣಿ ತೀರ್ಪನ್ನು ವೀಕ್ಷಿಸುತ್ತಿದ್ದರು.