ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಚುನಾವಣಾ ಆಯೋಗ ಇಂದು ಪತ್ರಿಕಾಗೋಷ್ಠಿ ನಡೆಸಿ ದಿನಾಂಕದ ಘೋಷಣೆ ಮಾಡಿದೆ. ವಿಧಾನಸಭೆ ಚುನಾವಣೆಯನ್ನು ಮೂರು ಹಂತದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಮೊದಲ ಹಂತದ ಮತದಾನ ಅಕ್ಟೋಬರ್ 28ರಂದು ನಡೆಯಲಿದೆ. ಎರಡನೇ ಹಂತದ ಮತದಾನ ನವೆಂಬರ್ 3ರಂದು ನಡೆಯಲಿದೆ. ಮೂರನೇ ಹಂತದ ಮತದಾನ ನವೆಂಬರ್ 7ರಂದು ನಡೆಯಲಿದೆ. ಚುನಾವಣಾ ಫಲಿತಾಂಶ ನವೆಂಬರ್ 10ರಂದು ನಡೆಯಲಿದೆ.
ಈ ಬಾರಿ ಬಿಹಾರ ವಿಧಾನಸಭೆ ಚುನಾವಣೆ ಭಿನ್ನವಾಗಿರಲಿದೆ. ಯಾಕೆಂದ್ರೆ ಕೊರೊನಾ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿದೆ. ಕೊರೊನಾ ಕಾರಣಕ್ಕೆ ಸಾವಿರಾರು ಕೂಲಿ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದಾರೆ. ಇದು ಕೂಡ ವಿಧಾನಸಭೆ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಕೊರೊನಾ ಪೀಡಿತರು ಕೂಡ ಮತದಾನ ಮಾಡಲು ಅವಕಾಶ ನೀಡಲಾಗ್ತಿದೆ. ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಪ್ರತಿ ಮತಗಟ್ಟೆಯಲ್ಲಿ ಸೋಪ್, ಸ್ಯಾನಿಟೈಜರ್ ಮತ್ತು ಇತರ ಸುರಕ್ಷಿತ ವಸ್ತುಗಳನ್ನು ಇಡುವಂತೆ ಸೂಚನೆ ನೀಡಲಾಗಿದೆ. ಹಾಗೆ ಮತದಾನ ಮಾಡಲು ಹೆಚ್ಚುವರಿ ಒಂದು ಗಂಟೆ ನೀಡಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ನೀಡಲಾಗ್ತಿದೆ.
ಪ್ರಚಾರದಲ್ಲೂ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮನೆ ಮನೆ ಪ್ರಚಾರಕ್ಕೆ 5 ಮಂದಿ ಮಾತ್ರ ಹೋಗಬೇಕು. ನಾಮಪತ್ರ ಸಲ್ಲಿಕೆ ಈ ಬಾರಿ ಆನ್ಲೈನ್ ಮೂಲಕ ಕೂಡ ನಡೆಯಲಿದೆ. ಠೇವಣಿಯನ್ನು ಕೂಡ ಆನ್ಲೈನ್ ಮಾಡಬಹುದಾಗಿದೆ. ಪ್ರಚಾರದ ವೇಳೆ ಕೈ ಕುಲುಕಲು ಅವಕಾಶ ನೀಡಲಾಗಿಲ್ಲ.
ಬಿಹಾರದಲ್ಲಿ 243 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಬಾರಿ ಮತದಾನ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 2020 ರ ಬಿಹಾರದಲ್ಲಿ ನಡೆಯುವ ಚುನಾವಣೆಯಲ್ಲಿ ಏಳು ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲಿದ್ದಾರೆ. ಈ ಬಾರಿ ಒಂದು ಬೂತ್‌ನಲ್ಲಿ ಕೇವಲ ಒಂದು ಸಾವಿರ ಮತದಾರರು ಮತ ಚಲಾಯಿಸಲಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ.