ನೈನಿತಾಲ್: ಚಿರತೆಯೊಂದು ನಗರದ ಮನೆಯೊಳಗೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಜಾರ್ಖಂಡ್ ಜನರನ್ನು ಭಯ ಭೀತರನ್ನಾಗಿಸಿದೆ.
ನೈನಿತಾಲ್ ನ ಟಾಲಿಟಾಲ್ ಜೂ ರಸ್ತೆಯಲ್ಲಿರುವ ಚಂದನ್ ಸಿಂಗ್ ಎಂಬ ಅಧಿಕಾರಿಯೊಬ್ಬರ ಮನೆಗೆ ನುಗ್ಗಿದ ಚಿರತೆ ನಾಯಿಯನ್ನು ಬೇಟೆಯಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
“ಚಿರತೆ ಬಾಗಿಲಲ್ಲಿ ಬಂದು ನಿಂತಿದ್ದನ್ನು ಕಂಡೆ. ಆದರೆ, ನಾನು ಪ್ರತಿಕ್ರಿಯೆ ಮಾಡುವುದರೊಳಗೆ ಅದು ನಾಯಿಯನ್ನು ಹಿಡಿದು, ಕೊಂದು ಬಿಟ್ಟಿತ್ತು” ಎಂದು ಚಂದನ್ ಸಿಂಗ್ ಪುತ್ರಿ ತಾಪ್ಸಿಸಾ ಹೇಳಿದ್ದಾರೆ.
ಮೊದಲ ಬಾರಿ ಚಿರತೆ ದಾಳಿ ಮಾಡಿದಾಗ ನಾಯಿ ತಪ್ಪಿಸಿಕೊಳ್ಳುತ್ತದೆ. ವಾಪಸ್ ಹೊರಟಿದ್ದ ಚಿರತೆ ಮರು ದಾಳಿ ಮಾಡಿ ನಾಯಿಯ ಕುತ್ತಿಗೆಯನ್ನೇ ಹಿಡಿಯುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಳೆದ 15 ದಿನದಲ್ಲಿ ಚಿರತೆ ಇವರ ಮನೆಯ ಎರಡನೇ ನಾಯಿಯನ್ನು ಹಿಡಿದು ಹೊತ್ತುಕೊಂಡು ಹೋಗಿದೆ. “ಕಳೆದ ಬಾರಿ ಚಿರತೆ ಹೇಗೆ ದಾಳಿ ಮಾಡಿತು ಎಂಬುದೇ ನಮಗೆ ಅಚ್ಚರಿಯಾಗಿತ್ತು. ಆದರೆ, ಈ ಸಾರಿ ನಮ್ಮ ಕಣ್ಣ ಮುಂದೆಯೇ ಎಲ್ಲ ನಡೆದು ಹೋಗಿದೆ” ಎಂದು ತಾಪ್ಸಿಸಾ ಬೇಸರ ಮಾಡಿಕೊಂಡಿದ್ದಾರೆ. “ಇಂಥ ಘಟನೆಗಳು ಮತ್ತೆ ನಡೆಯದಂತೆ ಕ್ರಮ ವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ” ಎಂದು ಚಂದನ್ ಸಿಂಗ್ ತಿಳಿಸಿದ್ದಾರೆ.