ದೆಹಲಿಯ ಕೇಜ್ರಿವಾಲ್ ಸರ್ಕಾರ ಹೊಸ ಅಬಕಾರಿ ನೀತಿಯನ್ನ ಜಾರಿಗೆ ತಂದಿದೆ. ಹೊಸ ನೀತಿಯ ಅನುಸಾರ ಮದ್ಯ ಸೇವನೆ ಮಾಡುವವರ ವಯಸ್ಸಿನ ಮಿತಿಯನ್ನು ಇಳಿಕೆ ಮಾಡಲಾಗಿದೆ.
ದೆಹಲಿಯಲ್ಲಿ ಮದ್ಯ ಖರೀದಿ ಮಾಡುವ ವಯಸ್ಸನ್ನ 25 ವರ್ಷದಿಂದ 21 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಡಿಸಿಎಂ ಮನೀಷ್ ಸಿಸೋಡಿಯಾ ಪ್ರಕಾರ ದೆಹಲಿಯಲ್ಲಿ ಬಹಳ ಸಮಯದಿಂದ ಮದ್ಯ ಕುಡಿಯುವ ಹಾಗೂ ಖರೀದಿ ಮಾಡುವ ವಯಸ್ಸನ್ನ ಇಳಿಕೆ ಮಾಡುವ ಬಗ್ಗೆ ಜನರು ಬೇಡಿಕೆಯನ್ನಿಟ್ಟದ್ದರು. ಇದೀಗ ಉತ್ತರ ಪ್ರದೇಶದ ನೋಯ್ಡಾದಂತೆ ಮದ್ಯ ಖರೀದಿ ಮಾಡುವ ವಯಸ್ಸನ್ನ 21 ವರ್ಷಕ್ಕೆ ಇಳಿಸಲಾಗಿದೆ.
ಹೊಸ ಅಬಕಾರಿ ನೀತಿಯ ಕುರಿತು ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಮಾಹಿತಿ ನೀಡಿದ್ದು ದೆಹಲಿಯಲ್ಲಿ ಹೊಸ ಸರ್ಕಾರಿ ಮದ್ಯದ ಅಂಗಡಿಗಳು ತೆರೆಯೋದಿಲ್ಲ ಎಂದು ಹೇಳಿದ್ದಾರೆ. ದೆಹಲಿಯಲ್ಲಿ 850 ಸರ್ಕಾರಿ ಮದ್ಯದಂಗಡಿಗಳಿವೆ. 2016ರ ಬಳಿಕ ದೆಹಲಿಯಲ್ಲಿ ಯಾವುದೇ ಹೊಸ ಸರ್ಕಾರಿ ಮದ್ಯದ ಅಂಗಡಿಗಳನ್ನ ತೆರೆಯಲಾಗಿಲ್ಲ. ಅಲ್ಲದೇ ಮುಂದೆ ಕೂಡ ಸರ್ಕಾರಿ ಮದ್ಯದ ಅಂಗಡಿಗಳನ್ನ ತೆರೆಯೋದೂ ಇಲ್ಲ ಎಂದು ಮಾಹಿತಿ ನೀಡಿದ್ರು.
ಅಲ್ಲದೇ ಸರ್ಕಾರಿ ಮದ್ಯದಂಗಡಿಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗ್ತಿದೆ. ದೆಹಲಿಯಲ್ಲಿ 60 ಪ್ರತಿಶತ ಸರ್ಕಾರಿ ಮದ್ಯದಂಗಡಿಗಿಂತ ಹೆಚ್ಚು ಆದಾಯ 40 ಪ್ರತಿಶತ ಖಾಸಗಿ ಮದ್ಯದಂಗಡಿಗಳಲ್ಲಿ ಸಿಗ್ತಿದೆ. ಸಂಕ್ಷಿಪ್ತವಾಗಿ ಹೇಳೋದಾದರೆ ರಾಜ್ಯದ ಬೊಕ್ಕಸದ ಆದಾಯವನ್ನೂ ಗಮನದಲ್ಲಿ ಇಟ್ಟುಕೊಂಡು ದೆಹಲಿ ಸರ್ಕಾರ ಈ ಕ್ರಮವನ್ನ ಕೈಗೊಂಡಿದೆ ಎನ್ನಲಾಗಿದೆ.