ಅಸ್ಸಾಂ ರಾಜ್ಯದಲ್ಲಿ ಪ್ರವಾಹ ಜನರನ್ನು ಸಂಕಷ್ಟಕ್ಕೆ ನೂಕಿದೆ. ಅಷ್ಟೇ ಏಕೆ ಪ್ರಾಣಿಗಳಿಗೂ ಕಷ್ಟ ನೀಡಿದೆ. ಆನೆಗಳು ಹಿಂಡು ಎತ್ತರದ ಪ್ರದೇಶಗಳಿಗೆ ಗುಳೆ ಹೋಗುತ್ತಿರುವ ದೃಶ್ಯ ಅಲ್ಲಿ ಕಂಡುಬರುತ್ತಿದೆ.
ಆನೆಗಳ ಬೃಹತ್ ಹಿಂಡು ರಸ್ತೆ ದಾಟಿ ಎತ್ತರದ ಪ್ರದೇಶಕ್ಕೆ ತೆರಳುತ್ತಿರುವ ವಿಡಿಯೋವೊಂದನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಸೋಮವಾರ ಟ್ವೀಟ್ ಮಾಡಿದ್ದಾರೆ. ಕಾಜಿರಂಗಾ ರಾಷ್ಟ್ರೀಯ ವನ್ಯಜೀವಿ ಧಾಮ ಹಾಗೂ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಗೆ ಸೇರಿದ ವಿಡಿಯೋ ಇದಾಗಿದೆ.
“ಪ್ರವಾಹದಿಂದ ಬಚಾವಾಗಲು ಆನೆಗಳು ಗುಳೆ ಹೋಗುತ್ತಿವೆ. ಮಾನ್ಸೂನ್ ಕಾಲದಲ್ಲಿ ಆನೆಗಳು ಸಂಚರಿಸುವ ಸಮಯವಾಗಿದ್ದು, ರಸ್ತೆಗಳನ್ನು ಅವು ದಾಟುವಾಗ ವಾಹನವನ್ನು ನಿಧಾನವಾಗಿ ಓಡಿಸಬೇಕು. ಅದೂ ರಾಷ್ಟ್ರೀಯ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಇನ್ನೂ ಎಚ್ಚರದಿಂದ ಇರಬೇಕು” ಎಂಬ ಸಂದೇಶ ಹಾಕಿದ್ದಾರೆ.
ಈ ವಿಡಿಯೋವನ್ನು ಕಾಜಿರಂಗಾ ವನ್ಯಜೀವಿಧಾಮದ ಅಧಿಕೃತ ಟ್ವಿಟರ್ ಖಾತೆಯಲ್ಲಿ ರೀ ಟ್ವೀಟ್ ಮಾಡಿದ್ದು, ಜನರಲ್ಲಿ ಜಾಗೃತಿ ಮೂಡಿಸಿದ ಪ್ರವೀಣ ಕಸ್ವಾನ್ ಅವರಿಗೆ ವನ್ಯಧಾಮ ಅಭಿನಂದನೆ ಸಲ್ಲಿಸಿದೆ. ವಿಡಿಯೋವನ್ನು 20 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, ಸಾವಿರಾರು ಲೈಕ್ಸ್ ಪಡೆದಿದೆ.