ಪಾಟ್ನಾ: ಮೇವು ಹಗರಣದಲ್ಲಿ ಜೈಲು ಸೇರಿದ್ದ ಬಿಹಾರ ಮಾಜಿ ಸಿಎಂ, ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಜಾಮೀನು ಅರ್ಜಿ ವಿಚಾರಣೆ ಏಪ್ರಿಲ್ 9ರಂದು ನಿಗದಿಯಾಗಿತ್ತು. ಆದರೆ ಪ್ರತ್ಯುತ್ತರ ಸಲ್ಲಿಸಲು ಸಿಬಿಐ ಕಾಲವಕಾಶ ಕೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಆರ್ ಜೆ ಡಿ ಮುಖ್ಯಸ್ಥನಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಲಾಲೂ ಪ್ರಸಾದ್ ಯಾದವ್ ವಿರುದ್ಧ ಸಿಬಿಐ ಚೈಬಾಸಾ ಹಗರಣ ಹಾಗೂ ದುಮ್ಕಾ ಖಜಾನೆ ಹಗರಣ ದಾಖಲಿಸಿತ್ತು. 2020ರ ಅಕ್ಟೋಬರ್ ನಲ್ಲಿ ಚೈಬಾಸಾ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಮೇವು ಹಗರಣದಲ್ಲಿ ಜಾಮೀನು ಸಿಗದ ಕಾರಣ ಅವರು ಜೈಲಿನಲ್ಲೇ ಕಾಲ ಕಳೆಯಬೇಕಾದ ಸ್ಥಿತಿ ಇತ್ತು. ಇದೀಗ ಈ ಹಗರಣದಲ್ಲಿಯೂ ಜಾಮೀನು ಮಂಜೂರಾಗಿದ್ದು, ಲಾಲೂ ಯಾದವ್ ಶೀಘ್ರದಲ್ಲಿಯೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.