
ಘರ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕ ತನ್ನ ನವಜಾತ ಶಿಶುವನ್ನು ನೋಡಲು ಶೀಘ್ರವೇ ಮನೆಗೆ ಹಿಂದಿರುವುದಾಗಿ ಕೆಲ ದಿನಗಳ ಹಿಂದಷ್ಟೆ ತಾಯಿಗೆ ಭರವಸೆ ನೀಡಿದ್ದರು ಎಂಬ ಕರುಳು ಹಿಂಡುವ ಸುದ್ದಿಯೊಂದು ಬಂದಿದೆ.
28 ವರ್ಷದ ಕುಂದನ್ ಕುಮಾರ್ ಓಜಾ ಎಂಬ ಸೈನಿಕನಿಗೆ 17 ದಿನಗಳ ಹಿಂದಷ್ಟೇ ಪುತ್ರಿ ಜನನವಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಶೀಘ್ರವೇ ರಜೆ ಪಡೆದು ಮನೆಗೆ ಬರುವುದಾಗಿ ದೂರವಾಣಿಯಲ್ಲಿ ಅವರು ತಾಯಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ರಾತ್ರಿ ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಅವರು ಮೃತಪಟ್ಟಿದ್ದಾರೆ.
ಸಾಹಿಬ್ ಗಂಜ್ ಜಿಲ್ಲೆಯ ದಿಹಾರಿ ಗ್ರಾಮದ ರೈತ ರವಿಶಂಕರ್ ಓಜಾ ಮತ್ತು ಭವಾನಿ ದೇವಿ ಅವರ ನಾಲ್ಕು ಮಕ್ಕಳಲ್ಲಿ ಎರಡನೆಯವರು ಇವರು. 2011ರಲ್ಲಿ ಸೈನ್ಯಕ್ಕೆ ಸೇರಿದ್ದು, ಒಂದು ವರ್ಷದ ಹಿಂದೆ ಇವರ ವಿವಾಹವಾಗಿತ್ತು.
ಜೂನ್ ಏಳರಂದು ತನ್ನ ತಾಯಿ ಭವಾನಿಯವರಿಗೆ ಕರೆ ಮಾಡಿದ್ದ ಕುಂದನ್, ನಾನು ಈಗ ಲಡಾಕ್ ನಲ್ಲಿದ್ದೇನೆ. ರಜೆ ಪಡೆದು ಕೂಡಲೇ ಬರುತ್ತೇನೆ ಎಂದು ಹೇಳಿದ್ದರಂತೆ.