ಬಿಹಾರದ ಅಖ್ತರ್ ಇಮಾಮ್ ಎಂಬ ಸಹೃದಯಿಯೊಬ್ಬರು ತಮ್ಮ ಹೆಸರಿನಲ್ಲಿರುವ 5 ಕೋಟಿ ರೂ.ಗಳ ಆಸ್ತಿಯನ್ನು ತಮ್ಮ ಮುದ್ದಿನ ಎರಡು ಆನೆಗಳಿಗೆ ಬರೆದಿಟ್ಟಿದ್ದಾರೆ. ಪಿಸ್ತೂಲ್ ಹಿಡಿದು ಬಂದು ಹೆದರಿಸಿದ್ದ ದುಷ್ಕರ್ಮಿಗಳಿಂದ ತಮ್ಮನ್ನು ರಕ್ಷಿಸಿದ್ದ ಆನೆಗೆ ಕೃತಜ್ಞತೆ ಸಲ್ಲಿಸಲು ಈ ರೀತಿ ಮಾಡಲು ಮುಂದಾಗಿದ್ದಾರೆ ಅಖ್ತರ್.
Asian Elephant Rehabilitation and Wildlife Animal Trust (AERAWAT) ಮುಖ್ಯ ನಿರ್ವಹಕರಾದ ಅಖ್ತರ್ ಇಮಾಮ್, 12 ವರ್ಷದ ಹುಡುಗನಾಗಿದ್ದಾಗಿಂದಲೂ ಆನೆಗಳನ್ನು ಸಾಕುತ್ತಲೇ ಬಂದಿದ್ದಾರೆ. ಮೋಟಿ ಹಾಗೂ ರಾಣಿ ಹೆಸರಿನ ಆನೆಗಳು ಅಖ್ತರ್ ಮನೆಯ ಸದಸ್ಯರಂತೆಯೇ ಆಗಿಬಿಟ್ಟಿವೆ.
“ನನ್ನನ್ನು ಕೊಲೆ ಮಾಡಲೆಂದು ದುಷ್ಕರ್ಮಿಗಳು ಪಿಸ್ತೂಲ್ ಸಹಿತ ಬಂದ ಸಂದರ್ಭದಲ್ಲಿ ಆನೆಯೊಂದು ಘೀಳಿಡಲು ಆರಂಭಿಸಿತು. ಇದರಿಂದ ಎಚ್ಚರಗೊಂಡ ನಾನು ಅಲಾರ್ಮ್ ಒಂದನ್ನು ಮೊಳಗಿಸುವ ಮೂಲಕ ಅವರನ್ನು ಓಡಿಸಲು ನೆರವಾಯಿತು” ಎಂದು ನೆನೆಯುತ್ತಾರೆ ಅಖ್ತರ್. “ಪ್ರಾಣಿಗಳು ಬಲೇ ನಿಯತ್ತು ಹೊಂದಿವೆ. ಬಹಳಷ್ಟು ವರ್ಷಗಳ ಕಾಲ ನಾನು ಆನೆಗಳ ಸಂರಕ್ಷಣೆಗೆ ಹೋರಾಡಿದ್ದೇನೆ. ನನ್ನ ಸಾವಿನ ಬಳಿಕ ಆನೆಗಳು ಅನಾಥವಾಗುವುದು ನನಗೆ ಇಷ್ಟವಿಲ್ಲ” ಎಂದು ಹೇಳುತ್ತಾರೆ ಅಖ್ತರ್.