ನೋಯ್ಡಾದ ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ನೀಲಾಂಜನ ಕಠಾರಿ, ದೆಹಲಿಯಲ್ಲಿ ನಾಯಿಮರಿಯೊಂದನ್ನು ಕೊಂಡುಕೊಂಡಿದ್ದರು. ಅದಕ್ಕೆ ಫಿಫಿ ಎಂದು ನಾಮಕರಣ ಮಾಡಿ, ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು.
ಲಾಕ್ ಡೌನ್ ಘೋಷಣೆಯಾದ್ದರಿಂದ 3 ತಿಂಗಳ ಮರಿ ಫಿಫಿಯನ್ನು ಪಾಲನಾ ಕೇಂದ್ರದಲ್ಲಿ ಬಿಟ್ಟು, ಕೋಲ್ಕತ್ತಾಗೆ ತೆರಳಿದ್ದರು. ಲಾಕ್ ಡೌನ್ ಸಡಿಲಿಕೆ ನಂತರ, ಫಿಫಿಗಾಗಿ ದೆಹಲಿಯಿಂದ ಕೋಲ್ಕತ್ತಾಗೆ ವಿಮಾನದ ವ್ಯವಸ್ಥೆಯನ್ನೂ ಮಾಡಿದರು.
ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣಕ್ಕೆ ಫಿಫಿ ಇದ್ದ ವಿಮಾನ ಬಂದಿಳಿಯಿತು.
ಭಾರೀ ಖುಷಿಯಿಂದ ಬಂದ ಕಠಾರಿ, ಬೋನು ತೆರೆದು ನೋಡಿದರು. ಬೆಚ್ಚಗೆ ಕುಳಿತಿದ್ದ ಫಿಫಿಯನ್ನ ಕಂಡು ಖುಷಿಪಟ್ಟರು. 5 ಗಂಟೆಗಳ ಕಾಲದ ಪ್ರಯಾಣದಲ್ಲಿ ಇಷ್ಟು ಆರಾಮವಾಗಿ ಕುಳಿತಿತ್ತಲಾ ಎಂದುಕೊಳ್ಳುತ್ತಿರುವಾಗಲೇ ವಿಮಾನ ನಿಲ್ದಾಣದಲ್ಲಿ ಕಣ್ಮುಚ್ಚಿ ಬಿಡುವುದರಲ್ಲಿ ಫಿಫಿ ನಾಪತ್ತೆಯಾಗಿದೆ.
6 ತಿಂಗಳ ಮುದ್ದಿನ ಫಿಫಿಗಾಗಿ ನಿಲ್ದಾಣದಲ್ಲೆಲ್ಲಾ ಹುಡುಕಾಡಿದರೂ ಸಿಗಲಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿ, ಪ್ರಾಣಿಪ್ರಿಯ ಸಂಘ, ಸಂಸ್ಥೆಯ ಸಹಾಯದೊಂದಿಗೆ ಹುಡುಕಿದರೂ ಸಿಗಲಿಲ್ಲ. ಇದರಿಂದ ಬೇಸರಗೊಂಡ ಕಠಾರಿ ಕುಟುಂಬ, ಮೂರು ದಿನದಿಂದ ಹುಡುಕಾಟ ಮುಂದುವರಿಸಿದ್ದು, ಫಿಫಿ ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಫಿಫಿಯ ಫೋಟೋ, ಬಹುಮಾನದ ವಿಷಯ ಪ್ರಕಟಿಸಿದ್ದಾರೆ.