ಸಂವಿಧಾನದ ರಕ್ಷಣೆಗಾಗಿ ಸರ್ಕಾರ, ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಕಾನೂನು ಸಮರ ನಡೆಸಿದ್ದ ಕೇರಳದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.
ಸರ್ಕಾರ ಮತ್ತು ಕೇಶವಾನಂದ ಭಾರತೀ ಸ್ವಾಮೀಜಿ ಅವರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಕೇರಳ ರಾಜ್ಯ ಸರ್ಕಾರ 1970 ರಲ್ಲಿ ಭೂ ಸುಧಾರಣೆ ಕಾಯ್ದೆ ಅನುಸಾರ ಕೇರಳ ಕಾಸರಗೋಡು ಸಮೀಪದ ಎಡನೀರು ಮಠಕ್ಕೆ ಸೇರಿದ ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯೆಗೆ ನೋಟಿಸ್ ಜಾರಿ ಮಾಡಿತ್ತು.
ಕೇರಳ ರಾಜ್ಯ ಸರ್ಕಾರದ ಭೂಸುಧಾರಣೆ ಕುರಿತಾಗಿ ಕೇಶವಾನಂದ ಭಾರತೀ ಸ್ವಾಮೀಜಿ ಭಾರತ ಸಂವಿಧಾನದ ಆರ್ಟಿಕಲ್ 26 ರ ಅನ್ವಯ ಸುಪ್ರೀಂಕೋರ್ಟ್ನಲ್ಲಿ ಕೇಸು ದಾಖಲಿಸುತ್ತಾರೆ. ಇದಕ್ಕಾಗಿ ನಾನಾಭೋಯ್ ಫಾಲ್ಕಿವಾಲಾ ಅವರ ಸಲಹೆಯನ್ನು ಪಡೆಯುತ್ತಾರೆ.
ದೇಶದ ನಾಗರಿಕರು ಆಸ್ತಿಯನ್ನು ಹೊಂದುವುದು ಮೂಲಭೂತ ಹಕ್ಕು ಹೌದು ಅಥವಾ ಇಲ್ಲ ಎನ್ನುವುದು ಈ ಕೇಸಿನ ಪ್ರಮುಖ ವಿಷಯವಾಗುತ್ತದೆ. ಅಲ್ಲದೇ ಮೂಲಭೂತ ಹಕ್ಕುಗಳ ಮಾನ್ಯತೆ ವಿಚಾರವಾಗಿ ವಿಸ್ತೃತ ಚರ್ಚೆ ನಡೆಯಲು ಈ ಪ್ರಕರಣ ವೇದಿಕೆಯಾಗುತ್ತದೆ. ಬರೋಬ್ಬರಿ 68 ದಿನಗಳ ಕಾಲ ಸುಪ್ರೀಂಕೋರ್ಟ್ನಲ್ಲಿ ವಾದ-ಪ್ರತಿವಾದ ನಡೆದು 1973 ರ ಮಾರ್ಚ್ 23 ರಂದು ಪ್ರಕರಣ ತೀರ್ಪು ಹೊರಬರುತ್ತದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ, ದೇಶದ ಸಂವಿಧಾನ ಕುರಿತಾದ ಮಹತ್ವದ ತೀರ್ಪು ಇದಾಗಿದೆ.
ಇಂತಹ ಪ್ರಕರಣದಲ್ಲಿ ಕೇಸು ದಾಖಲಿಸಿದ್ದ ಕೇಶವಾನಂದಭಾರತೀಯವರಿಗೆ ಆಗ 29 ವರ್ಷ ವಯಸ್ಸು. ಕಾಸರಗೋಡಿನ ಎಡನೀರು ಮಠದಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.