ಮಾಸ್ಕ್ ಧರಿಸಿ ಸಾಲಾಗಿ ನಿಂತಿರುವ ಜನ, ಕೈಯಲ್ಲಿ ಕೈಗವಸು ತೊಟ್ಟುಕೊಂಡು ಆಹಾರ ಪ್ಯಾಕೇಟ್ ಸಜ್ಜುಗೊಳಿಸುತ್ತಿರುವ ಸ್ವಯಂ ಸೇವಕರು ಹಾಗೂ ರಕ್ತದಾನ ಮಾಡುವುದಕ್ಕೆ ಸಾಲಾಗಿ ನಿಂತಿರುವ ಸಾರ್ವಜನಿಕರು.
ಇದೆಲ್ಲ ಕಂಡು ಬಂದದ್ದು, ಕೋಯಿಕ್ಕೋಡ್‌ನಲ್ಲಿ. ಕೇರಳಕ್ಕೆ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಪತನಗೊಂಡ ಬಳಿಕ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಅಗತ್ಯ ನೆರವನ್ನು ನೀಡಲು ಕೇರಳದ ಅನೇಕರು ಸ್ವಯಂ ಸೇವಕರಾಗಿ ಮುಂದೆ ಬಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕರಿಗೆ ರಕ್ತದಾನ ಮಾಡುವುದರೊಂದಿಗೆ, ಆಹಾರ ಉಪಚಾರವನ್ನು ಮಾಡಿದರು.
ಶುಕ್ರವಾರ ರಾತ್ರಿ ನಡೆದ ವಿಮಾನ ದುರಂತದಲ್ಲಿ ಇಬ್ಬರು ಪೈಲೆಟ್ ಸೇರಿದಂತೆ 18 ಮಂದಿ ಮೃತಪಟ್ಟರು. ವಂದೇ ಮಾತರಂ ಯೋಜನೆಯಲ್ಲಿ ದುಬೈನಿಂದ ವಾಪಸಾಗುತ್ತಿದ್ದ 190 ಮಂದಿಯನ್ನು ಹೊತ್ತ ವಿಮಾನ ರನ್‌ವೇನಲ್ಲಿ ತುಂಡಾದ ಬಳಿಕ ಭಾರಿ ಅನಾಹುತ ಸಂಭವಿಸಿದೆ.
ಆದರೆ ಇದಕ್ಕೂ ಮೊದಲು ಪ್ರವಾಹದಿಂದ ಕೇರಳದಲ್ಲಾಗಲೇ ಅನಾಹುತ ಸಂಭವಿಸಿತ್ತು. ಆದ್ದರಿಂದ ಶುಕ್ರವಾರವನ್ನು ಬ್ಲಾಕ್ ಡೇ ಎಂದು ಕರೆಯಲಾಗಿದೆ. ಆದರೆ ಈ ವೇಳೆ ಸಾರ್ವಜನಿಕರು ಸಂತ್ರಸ್ತರಿಗೆ ನೆರವಾಗಿರುವ ಫೋಟೋ ಹಾಗೂ ವಿಡಿಯೊಗಳು ಇದೀಗ ವೈರಲ್ ಆಗಿದೆ.