
ಇದೊಂದು ಅಚ್ಚರಿಯ ಘಟನೆ ‘ಶವ’ದ ಫೋಟೋ ತೆಗೆಯಲು ಬಂದ ಛಾಯಾಗ್ರಾಹಕ ವ್ಯಕ್ತಿಯ ಜೀವ ಉಳಿಸಿದ್ದಾನೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಛಾಯಾಗ್ರಾಹಕ ಥಾಮಸ್ ಎಂಬಾತನನ್ನು ಪೊಲೀಸರು ಶವದ ಫೋಟೋ ತೆಗೆಯಲು ಕರೆಸಿದ್ದರು.
ಶಿವ ದಾಸನ್ ಎಂಬಾತನ ತಲೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆಂದು ಭಾವಿಸಲಾಗಿತ್ತು. ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪರಿಗಣಿಸುವ ಉದ್ದೇಶದಿಂದ ಛಾಯಾಚಿತ್ರ ತೆಗೆಸಲು ಪೊಲೀಸರು ಬಯಸಿದ್ದರು.
ಕೊಠಡಿಯಲ್ಲಿ ಬೆಳಕು ಕಡಿಮೆ ಇದ್ದಿದ್ದರಿಂದ ಛಾಯಾಗ್ರಾಹಕ ಟಾಮಿ ಥಾಮಸ್ ಶವದ ಸಮೀಪ ಫೋಟೋ ತೆಗೆಯುತ್ತಿದ್ದಾಗ ದೇಹದಲ್ಲಿ ಸಣ್ಣದಾದ ಶಬ್ದ ಹೊರಹೊಮ್ಮುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಅವರು ಒಂದು ಕ್ಷಣ ಗಾಬರಿಯಾದರೂ ಮರು ಪರಿಶೀಲಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿವದಾಸನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.