ತಿರುವನಂತಪುರಂ: ದೇಶದ ಗಮನ ಸೆಳೆದ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ತ್ರಿಶೂರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸಿಯುಗೆ ಮಂಗಳವಾರ ಸ್ಥಳಾಂತರಿಸಲಾಗಿದೆ. ತ್ರಿಶೂರ್ ಜಿಲ್ಲೆಯ ವಿಯೂರ್ ನ ಕೇಂದ್ರ ಕಾರಾಗೃಹದಲ್ಲಿದ್ದ ಸ್ವಪ್ನಾ ಸುರೇಶ್ ಗೆ ನಿನ್ನೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಐಸಿಯುಗೆ ಸ್ಥಳಾಂತರ ಮಾಡಲಾಗಿದೆ. ಇಸಿಜಿ ವರದಿಯಲ್ಲಿ ವ್ಯತ್ಯಾಸ ಕಂಡು ಬಂದಿರುವುದು ಗೊತ್ತಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ರಾಜತಾಂತ್ರಿಕ ಮಾರ್ಗಗಳ ಮೂಲಕ ಕೇರಳ ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪ ಸ್ವಪ್ನಾ ಸುರೇಶ್ ಮೇಲಿದೆ. 14.82 ಕೋಟಿ ರೂಪಾಯಿ ಮೌಲ್ಯದ 30 ಕೆಜಿ ಚಿನ್ನವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಅವರು ಕಳ್ಳಸಾಗಣೆ ಮಾಡಿದ್ದರು. ಜುಲೈ 5 ರಂದು ಕಸ್ಟಮ್ಸ್ ನಲ್ಲಿ ಪ್ರಕರಣ ದಾಖಲಾಗಿ ನಂತರದಲ್ಲಿ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಲಾಗಿತ್ತು.