ದೇಶದ ಗಮನ ಸೆಳೆದಿದ್ದ ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಯುಎಇಯಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲು ನೆರವು ನೀಡಿದ ಆರೋಪದ ಮೇಲೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಕೊಚ್ಚಿ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ.
ಎರ್ನಾಕುಲಂ ಜಿಲ್ಲೆ ಮಾವಟ್ಟುಪಾಳ್ಯದ ರಾಬಿನ್ ಕೆ. ಹಮೀದ್ ಬಂಧಿತ ಆರೋಪಿ. ದುಬೈನಿಂದ ರಾಬಿನ್ ಬಂದಿಳಿಯುತ್ತಿದ್ದಂತೆ ರಾಷ್ಟ್ರೀಯ ತನಿಖಾದಳ ವಶಕ್ಕೆ ಪಡೆದುಕೊಂಡಿದೆ. ಆರೋಪಿ ವಿರುದ್ಧ ಎರ್ನಾಕುಲಂನ ಎನ್.ಐ.ಎ. ವಿಶೇಷ ಕೋರ್ಟ್ ನಿಂದ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.
ಜುಲೈ 5 ರಂದು 14.82 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಲಾಗಿತ್ತು. ತ್ರಿವೇಂಡ್ರಂ ಏರ್ಪೋರ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 30 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.