ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಅವರು ಮದುವೆಯಾಗುತ್ತಿದ್ದಾರೆ. ವೀಣಾ ಅವರಿಗೆ ಇದು ಎರಡನೇ ವಿವಾಹವಾಗಿದೆ. ವಿಶೇಷ ಅಂದರೆ ವೀಣಾ ಅವರ ಕೈ ಹಿಡಿಯುತ್ತಿರುವವರು ಸಿಪಿಐ ಯುವ ಘಟಕ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಸ್. ರಿಯಾಸ್ ಅವರೊಂದಿಗೆ ವೀಣಾ ವಿವಾಹ ನೆರವೇರಲಿದೆ ಎನ್ನಲಾಗುತ್ತಿದೆ.
ಇನ್ನು ಮುಹಮ್ಮದ್ ರಿಯಾಸ್ ಅವರಿಗೂ ಇದು ಎರಡನೇ ಮದುವೆಯಂತೆ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವೀಣಾ ಅವರು ಪತಿಯಿಂದ ದೂರವಾಗಿದ್ದಾರೆ. ಇವರಿಗೆ 5 ವರ್ಷದ ಒಬ್ಬ ಮಗನಿದ್ದಾನೆ. ರಿಯಾಸ್ ಕೂಡ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಇವರಿಗೂ ಇಬ್ಬರು ಪುತ್ರರಿದ್ದಾರೆ.
ಜೂನ್ 15 ರಂದು ಇವರ ವಿವಾಹ ಮಹೋತ್ಸವ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಿಯಾಸ್ ಅವರು 2009 ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.