ತಿರುವನಂತಪುರಂ: ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿತ ಬಿಷಪ್ ಫ್ರಾಂಕೋ ಮುಳಕಾಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ಫ್ರಾಂಕೋಗೆ ನೀಡಲಾಗಿದ್ದ ಜಾಮೀನನ್ನು ಕೋರ್ಟ್ ರದ್ದುಪಡಿಸಿದೆ. ಜಾಮೀನು ನೀಡುವ ಸಂದರ್ಭದಲ್ಲಿ ಷರತ್ತು ವಿಧಿಸಲಾಗಿದ್ದು ಆದರೆ ಬಿಷಪ್ ಫ್ರಾಂಕೋ ಷರತ್ತು ನಿಯಮ ಮೀರಿದ್ದರು. ಅವರು ಒಂದು ಸಲವೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರದ್ದು ಪಡಿಸಿರುವ ಕೋರ್ಟ್ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.
ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಬಿಷಪ್ ಗೈರುಹಾಜರಿ ಬಗ್ಗೆ ಆಕ್ಷೇಪಿಸಿದ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಅವರಿಗೆ ನೀಡಲಾಗಿದ್ದ ಜಾಮೀನು ರದ್ದು ಮಾಡಲಾಗಿದೆ.
ಅವರು ಪಂಜಾಬ್ ನಲ್ಲಿ ಕಂಟೇನ್ಮೆಂಟ್ ವಲಯದಲ್ಲಿ ಇರುವ ಕಾರಣ ಕೋರ್ಟ್ ಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಆರೋಪಿ ಪರ ವಕೀಲರು ಹೇಳಿದ್ದು, ಅವರು ವಾಸವಾಗಿರುವ ಪ್ರದೇಶ ಕಂಟೇನ್ಮೆಂಟ್ ಜೋನ್ ನಲ್ಲಿ ಇಲ್ಲವೆಂದು ಪ್ರತಿವಾದಿ ವಕೀಲರು ಮಾಹಿತಿ ನೀಡಿದ್ದರು.
2014 ರಿಂದ 16 ರ ನಡುವೆ ಬಿಷಪ್ 13 ಸಲ ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತಮ್ಮ ಪ್ರಭಾವದಿಂದ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.