ದೇಶದಲ್ಲಿ ಕೊರೊನಾ ಸೋಂಕು ಆರ್ಭಟಿಸುತ್ತಿದೆ. ಇದು ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಸಾರ್ವಜನಿಕರು ಆರ್ಥಿಕವಾಗಿ ತತ್ತರಿಸಿಹೋಗಿದ್ದಾರೆ. ಜೊತೆಗೆ ಶೈಕ್ಷಣಿಕ ವಲಯವೂ ಸಮಸ್ಯೆಯನ್ನು ಎದುರಿಸುತ್ತಿದ್ದು, ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ.
ಹೀಗಾಗಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಆ ಶೈಕ್ಷಣಿಕ ವರ್ಷದ ಇತರೆ ಪರೀಕ್ಷೆಗಳಲ್ಲಿ ಗಳಿಸಿದ ಅಂಕ ಗಳ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಪ್ರಮೋಷನ್ ನೀಡಲಾಗಿತ್ತು. ಇದರ ಮಧ್ಯೆ ಕೇಂದ್ರೀಯ ವಿದ್ಯಾಲಯ 9 ಮತ್ತು 11 ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳ ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ.
ಈ ಮೊದಲು 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳು ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಅಂತವರು ಮುಂದಿನ ತರಗತಿಗೆ ಹೋಗಲು ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸ್ ಆಗಬೇಕೆಂದು ತಿಳಿಸಲಾಗಿತ್ತು. ಇದೀಗ ಈ ಆದೇಶದಲ್ಲಿ ಮಾರ್ಪಾಟು ಮಾಡಲಾಗಿದ್ದು, 9 ಮತ್ತು 11 ನೇ ತರಗತಿಯ ಎಲ್ಲ 5 ವಿಷಯಗಳಲ್ಲೂ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೂ ಸಹ ಅವರಿಗೆ ಶಾಲೆಯಿಂದ ಪ್ರಾಜೆಕ್ಟ್ ವರ್ಕ್ ನೀಡುವ ಮೂಲಕ ಅಂಕಗಳನ್ನು ನೀಡಿ ಮುಂದಿನ ತರಗತಿಗೆ ಪ್ರಮೋಟ್ ನೀಡಲು ಸೂಚಿಸಲಾಗಿದೆ. ಈ ಕುರಿತು ಕೇಂದ್ರೀಯ ವಿದ್ಯಾಲಯದ ಜಂಟಿ ನಿರ್ದೇಶಕರಾದ ಪಿಯಾ ಠಾಕೂರ್ ಆದೇಶ ಹೊರಡಿಸಿದ್ದಾರೆ.