ಕೊರೊನಾ ವೈರಸ್ ಪ್ರಮಾಣ ಹೆಚ್ಚುತ್ತಿರುವ ಕಾರಣ ಕಾಶ್ಮೀರದ ಉರ್ದು ದಿನ ಪತ್ರಿಕೆಯೊಂದರ ಪ್ರತಿಯೊಂದು ಪ್ರತಿಯ ಜತೆ ಒಂದೊಂದು ಫೇಸ್ ಮಾಸ್ಕ್ ಅನ್ನು ಉಚಿತವಾಗಿ ನೀಡುವ ಮೂಲಕ ಓದುಗರಲ್ಲಿ ಅಚ್ಚರಿ ಮೂಡಿಸಲಾಗಿದೆ.
ಡೇಲಿ ರೋಶನಿ ಪತ್ರಿಕೆ ಮಂಗಳವಾರದ ಸಂಚಿಕೆಯಲ್ಲಿ ಪ್ಯಾಕ್ ಮಾಡಿದ ಮಾಸ್ಕ್ ಅನ್ನು ಪುಟಕ್ಕೆ ಅಂಟಿಸಲಾಗಿದೆ. ಮಾಸ್ಕ್ ಬಳಕೆ ಅತಿ ಮುಖ್ಯ ಎಂದು ಪಕ್ಕದಲ್ಲಿ ಸಂದೇಶ ಬರೆಯಲಾಗಿದೆ.
“ಮಾಸ್ಕ್ ಪ್ಯಾಕ್ ಮಾಡಲು ಹಾಗೂ ಅಂಟಿಸಲು ಹೆಚ್ಚುವರಿ ಕೆಲಸಗಾರರನ್ನು ಪಡೆದಿದ್ದೆವು” ಎಂದು ಪತ್ರಿಕೆಯ ಪ್ರಧಾನ ಸಂಪಾದಕ ಜಾಹೂರ್ ಅಹಮದ್ ಶೋರಾ ತಿಳಿಸಿದ್ದಾರೆ.
ಕೊರೊನಾ ತಡೆಯಲು ಮಾಸ್ಕ್ ಒಂದೇ ಮಾರ್ಗ. ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎಂದು ಯೋಚಿಸುತ್ತಿರುವಾಗ ಜೇಹದ್ ಶೋರಾ ಎಂಬುವವರು ಮಾಸ್ಕ್ ಒದಗಿಸುವ ಹೊಸ ಆಲೋಚನೆ ಕೊಟ್ಟರು ಎಂದು ಸಂಪಾದಕ ಜಾಹೂರ್ ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 14,650 ಜನರಿಗೆ ಇದುವರೆಗೆ ಕೊರೋನಾ ತಗುಲಿದ್ದು, ನಿಯಂತ್ರಣಕ್ಕೆ ಜು.12 ರಿಂದ ಮತ್ತೆ ಪಾರ್ಕ್ ಗಳನ್ನು ಲಾಕ್ ಡೌನ್ ಮಾಡಲಾಗಿದೆ.