ಕಾರು, ವ್ಯಾನ್, ಬೈಕ್, ಟೀ ಶರ್ಟ್ ಗಳಲ್ಲಿ ಆ್ಯಂಗ್ರಿ ಹನುಮಾನ್ ಚಿತ್ರದ್ದೇ ಹವಾ….ಕರಣ್ ಆಚಾರ್ಯ ಚಿತ್ರಿಸಿದ ಈ ಗ್ರಾಫಿಕ್ಸ್ ದೇಶಾದ್ಯಂತ ಭಾರಿ ಜನಪ್ರಿಯತೆಯನ್ನು ಪಡೆದಿದೆ.
ಈ ಹನುಮಾನ್ ಗ್ರಾಫಿಕ್ಸ್ ನಿಂದಾಗಿಯೇ ಕರಣ್ ಗೆ ಕೈ ತುಂಬ ಕೆಲಸಗಳು ಸಿಕ್ಕಿವೆ. ಕೇಸರಿ ಬಣ್ಣದಲ್ಲಿ, ಹುಬ್ಬುಗಳನ್ನು ಕೋಪದಲ್ಲಿ ಉಬ್ಬಿಸಿ ನೋಡುತ್ತಿರುವ ಈ ಹನುಮನ ಗ್ರಾಫಿಕ್ಸ್ ನ್ನು ಕರಣ್ 5 ವರ್ಷಗಳ ಹಿಂದೆ ಸೃಷ್ಟಿಸಿದ್ರು. ಅದೀಗ ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿದೆ. ಕೇರಳದ ಕಾಸರಗೋಡಿನ ಕುಡ್ಲು ಗ್ರಾಮದವರಾದ ಕಲಾವಿದ ಕರಣ್ ಆಚಾರ್ಯ, ಗಣೇಶ ಚತುರ್ಥಿಗಾಗಿ ವೆಕ್ಟರ್ ಗ್ರಾಫಿಕ್ಸ್ ನೊಂದಿಗೆ ಬಂದಾಗ ಈ ಚಿತ್ರ ರಚನೆಯಾಯ್ತು.
ಯೂತ್ ಕ್ಲಬ್ ನಿಂದ ಪ್ರತಿವರ್ಷವೂ ಆಚರಿಸಲ್ಪಡುವ ಗಣೇಶ ಹಬ್ಬದಲ್ಲಿ ಭಿನ್ನವಾಗಿ ಫ್ಲಾಗ್ ಗಳನ್ನು ಬಳಸುತ್ತೇವೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಫ್ಲಾಗ್ ಡಿಸೈನ್ ಮಾಡಬೇಕಿತ್ತು. ನನ್ನ ಸ್ನೇಹಿತರು ಆ ಬಾರಿ ಹೊಸ ರೀತಿಯಲ್ಲಿ ಫ್ಲಾಗ್ ರಚಿಸುವಂತೆ ತಿಳಿಸಿದ್ರು. ಅಂದು ರಚನೆಯಾಗಿದ್ದೇ ಈ ಆ್ಯಂಗ್ರಿ ಲುಕ್ ನಲ್ಲಿರುವ ಹನುಮಂತನ ಚಿತ್ರ ಅಂತಾ ನೆನಪಿಸಿಕೊಳ್ತಾರೆ ಕರಣ್.
ಅಂದು ತಮ್ಮ ಸ್ನೇಹಿತ ತುರ್ತಾಗಿ ಕೇಳಿದ ಅಂತಾ ಯಾವುದೇ ವಾಟರ್ ಮಾರ್ಕ್ ಹಾಕದೆ ಇದನ್ನು ಕಳಿಸಿದೆ. ಯಾಕೆಂದ್ರೆ ಸ್ನೇಹಿತನ ಮೇಲೆ ನನಗೆ ನಂಬಿಕೆ ಇತ್ತು. ಹೀಗಾಗಿ ವಾಟ್ಸಾಪ್ ನಲ್ಲಿ ಹನುಮಾನ್ ಫೋಟೋ ಕಳಿಸಿದೆ. ಆದ್ರೆ ಅದು ಎಲ್ಲಾ ವಾಟ್ಸಾಪ್ ಗಳಲ್ಲೂ ಹರಿದಾಡತೊಡಗಿತು. ಜೊತೆಗೆ ಎಲ್ಲಾ ವಾಹನಗಳ ಮೇಲೆ ನಾನು ಸೃಷ್ಟಿಸಿದ ಹನುಮಾನ್ ಚಿತ್ರವೇ ರಾರಾಜಿಸತೊಡಗಿತು ಅಂತಾರೆ. ಇದ್ರಿಂದ ನನ್ನನ್ನು ಜನ ಗುರುತಿಸಿದ್ರು. ಈ ಹನುಮಾನ್ ಚಿತ್ರ ನನ್ನ ಬದುಕನ್ನು ಬದಲಾಯಿಸಿತು ಅನ್ನುವ ಕರಣ್ ಗೀಗ ಕೈತುಂಬ ಕೆಲಸವಿದೆ.