ಜಗತ್ತಿನಲ್ಲಿ ಏನೇನೂ ಚಿತ್ರವಿಚಿತ್ರ ಘಟನಾವಳಿಗಳು ದಿನಂಪ್ರತಿ ಆಗುತ್ತಲೇ ಇರುತ್ತವೆ.
ಎರಡು ವರ್ಷಗಳಿಂದ ಕಳುವಾಗಿದ್ದ ಕಾರೊಂದನ್ನು ಪೊಲೀಸ್ ಅಧಿಕಾರಿಯೊಬ್ಬರು ಬಳಸುತ್ತಿದ್ದ ವಿಷಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜರುಗಿದೆ.
ಕಾರಿನ ಮಾಲೀಕರಿಗೆ, ತಮ್ಮ ವಾಹನವು ಸರ್ವೀಸ್ ಸೆಂಟರ್ ಒಂದರಲ್ಲಿ ರಿಪೇರಿ ಮಾಡಿಸಿಕೊಂಡಿದ್ದು, ಈ ಸಂಬಂಧ ಫೀಡ್‌ಬ್ಯಾಕ್ ಬೇಕೆಂದು ತಮ್ಮ ದೂರವಾಣಿ ಸಂಖ್ಯೆಗೆ ಕರೆ ಬಂದಾಗ ಚಕಿತರಾಗಿದ್ದಾರೆ. ಈ ಬಗ್ಗೆ ಕರೆಯಲ್ಲಿ ಹೆಚ್ಚಿನ ವಿವರ ಕೇಳಿದಾಗ, ಆ ಕಾರನ್ನು ಠಾಣಾಧಿಕಾರಿಗೆ ಹಿಂದಿರುಗಿಸಲಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿನ ಬಿತೂರ್ ಪೊಲೀಸ್ ಠಾಣೆಯ ಅಧಿಕಾರಿ ಕುಶಲೇಂದ್ರ ಪ್ರತಾಪ್ ಸಿಂಗ್ ತಮ್ಮ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಲೀಕರಿಗೆ ತಿಳಿದು ಬಂದಿದೆ. ಒಂದು ವೇಳೆ ಈ ಕಾರನ್ನು ಸರ್ವೀಸ್ ಕೇಂದ್ರಕ್ಕೆ ಕೊಂಡೊಯ್ಯದೇ ಇದ್ದಲ್ಲಿ ಪ್ರತಾಪ್ ಅದನ್ನು ಹಾಗೇ ಬಳಸುತ್ತಿದ್ದರು ಎನ್ನಲಾಗಿದೆ.
ಡಿಸೆಂಬರ್ 31, 2018ರಂದು ತಮ್ಮ ಕಾರು ವಾಶಿಂಗ್ ಕೇಂದ್ರದಿಂದ ಕಳುವಾಗಿತ್ತು ಎಂದು ಕಾರಿನ ಮಾಲೀಕ ಒಮೇಂದ್ರ ಸೋನಿ ತಿಳಿಸಿದ್ದರು. ಇದಾದ ಬಳಿಕ ಬರ‍್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಬಳಿಕ ಸರ್ವೀಸ್ ಕೇಂದ್ರ ಕೊಟ್ಟ ಮಾಹಿತಿ ಆಧರಿಸಿ ಹೊರಟ ಸಿಂಗ್ ತಮ್ಮ ಕಾರನ್ನು ಮರಳಿ ಪಡೆಯಲು ಸಫಲರಾಗಿದ್ದಾರೆ. ಆ ಕಾರನ್ನು ಯಾರೂ ಬಂದು ತೆಗೆದುಕೊಂಡು ಹೋಗದ ಕಾರಣ ತಾವೇ ಬಳಸುತ್ತಿದ್ದದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆ ಸಂಬಂಧ ಕಾನ್ಪುರ ಪೊಲೀಸರು ಆಂತರಿಕ ತನಿಖೆಗೆ ಆದೇಶ ನೀಡಿದ್ದಾರೆ.