ಉತ್ತರಪ್ರದೇಶದ ಕಾನ್ಪುರದ ಕುಖ್ಯಾತ ರೌಡಿ ಶೀಟರ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದಾನೆ. 8 ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆಯನ್ನು 7 ದಿನಗಳ ನಂತರ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲ ದೇವಾಲಯದಲ್ಲಿ ಬಂಧಿಸಲಾಗಿತ್ತು.
ಈ ವೇಳೆ ಪೊಲೀಸರು ತನ್ನನ್ನು ಎನ್ ಕೌಂಟರ್ ಮಾಡಬಹುದೆಂದು ಮೊದಲೇ ಊಹಿಸಿದ್ದ ವಿಕಾಸ್ ದುಬೆ ನಾನು ಕಾನ್ಪುರದ ವಿಕಾಸ್ ದುಬೆ ಎಂದು ಕೂಗಿ ಹೇಳಿದ್ದ. ಕಾನ್ಪುರಕ್ಕೆ ಆತನನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕಾರ್ ಪಲ್ಟಿಯಾಗಿದ್ದು, ಈ ವೇಳೆ ಪೊಲೀಸರ ಗನ್ ಕಸಿದು ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿಕಾಸ್ ದುಬೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ವಿಕಾಸ್ ದುಬೆಯ ಐವರು ಸಹಚರರನ್ನು ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿದ್ದ ಪೊಲೀಸರು ವಿಕಾಸ್ ದುಬೆಯನ್ನೂ ಎನ್ ಕೌಂಟರ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆದ ಎನ್ಕೌಂಟರ್ ಎಂಬ ಆರೋಪ ಕೇಳಿಬಂದಿದೆ. ಆದರೆ, ಪೊಲೀಸ್ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದು, ಕಾರ್ ಪಲ್ಟಿಯಾದ ಸಂದರ್ಭದಲ್ಲಿ ವಿಕಾಸ್ ದುಬೆ ಪೊಲೀಸರ ಗನ್ ಕಸಿದು ಬೆದರಿಸಿ ಪರಾರಿಯಾಗಲು ಮುಂದಾದಾಗ ಶರಣಾಗಲು ಸೂಚನೆ ನೀಡಿ ಫೈರಿಂಗ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಗುಂಡು ತಗುಲಿ ಗಾಯಗೊಂಡಿದ್ದ ದುಬೆಯನ್ನು ಎಸ್.ಟಿ.ಎಫ್. ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಹಲವು ಪಕ್ಷಗಳ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳೊಂದಿಗೆ ಒಡನಾಟ ಹೊಂದಿದ್ದ ವಿಕಾಸ್ ದುಬೆ ಠಾಣೆಯಲ್ಲೇ ಮಾಜಿ ಸಚಿವನ ಹತ್ಯೆ ಸೇರಿದಂತೆ 60 ಕೇಸ್ ಗಳಲ್ಲಿ ಭಾಗಿಯಾಗಿದ್ದ. ಆತ ವಿಚಾರಣೆ ವೇಳೆ ಹೇಳಲಿದ್ದ ಮಾಹಿತಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇತ್ತು. ಈ ಕಾರಣದಿಂದಲೇ ಆತನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಹೇಳಲಾಗಿದೆ.