ಸಾಮಾಜಿಕ ಜಾಲತಾಣಗಳಲ್ಲಿ ಜನರು ಎಡ/ಬಲಗಳ ಆಧಾರದಲ್ಲಿ ಕಚ್ಚಾಡಿಕೊಳ್ಳುವ ಟ್ರೆಂಡ್ ಆರಂಭವಾದಾಗಿನಿಂದಲೂ ದೇಶದಲ್ಲಿ ನಡೆಯುವ ಪ್ರತಿಯೊಂದು ಗಂಭೀರ ವಿಚಾರವನ್ನೂ ಸಹ ಹಗುರವಾಗಿ ತೆಗೆದುಕೊಳ್ಳುವ ಅಭ್ಯಾಸ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ.
ಕೃಷಿ ಕ್ಷೇತ್ರವನ್ನು ಮುಕ್ತ ಮಾರುಕಟ್ಟೆಗೆ ತೆರವುಗೊಳಿಸಿ ರೈತರ ಉತ್ಪನ್ನಗಳಿಗೆ ಬೆಲೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಕೆಲವೊಂದು ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ನಿರತವಾಗಿವೆ.
ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳೇ ವ್ಯವಸ್ಥಿತವಾದ ರಾಜಕೀಯ ಸಂಚುಗಳು ಎಂಬೆಲ್ಲಾ ಬಲವಾದ ಆಪಾದನೆಗಳೂ ಎದ್ದಿವೆ. ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ದೆಹಲಿಯ ಶಹೀನ್ ಬಾಗ್‌ನಲ್ಲಿ ತಿಂಗಳುಗಟ್ಟಲೇ ನಡೆದ ಪ್ರತಿಭಟನೆಯ ಮೇಲೂ ಇಂಥದ್ದೇ ಆಪಾದನೆ ಬಲವಾಗಿತ್ತು. ಆ ವೇಳೆ ವೃದ್ಧೆಯೊಬ್ಬರು ಹೋರಾಟಗಾರರ ನಡುವೆ ಕಾಣಿಸಿಕೊಂಡು ’ಶಹೀನ್ ಬಾಗ್ ದಾದಿ’ ಎಂದು ಹೆಸರಾಗಿದ್ದರು.
ಇದೀಗ ಅದೇ ದಾದಿ ರೈತರ ಹೋರಾಟದಲ್ಲೂ ಭಾಗಿಯಾಗಿದ್ದಾರೆ ಎಂದು ಆಪಾದಿಸಿ ನೆಟ್ಟಿಗರು ಕೆಲವೊಂದು ಮೆಮೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
ಸದಾ ಸುದ್ದಿಯಲ್ಲಿರಲು ಬಯಸುವ ಕಂಗನಾ ರಣಾವತ್ ಅಂಥದ್ದೊಂದು ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಭಾರೀ ಚರ್ಚೆಗೆ ಈಡಾಗಿದ್ದರು. ಕಂಗನಾ ಹೀಗೆಲ್ಲಾ ಆಧಾರ ರಹಿತ ಟ್ವೀಟ್‌ಗಳನ್ನು ಮಾಡುವ ಮೂಲಕ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಆರೋಪಗಳು ಟ್ವಿಟ್ಟರ್‌ನಲ್ಲಿ ಜೋರಾದ ಬಳಿಕ ’ಮಣಿಕರ್ಣಿಕಾ’ ಖ್ಯಾತಿಯ ನಟಿ ತಮ್ಮ ಟ್ವೀಟ್ ಅನ್ನು ಹಿಂಪಡೆದುಕೊಂಡಿದ್ದಾರೆ.