ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ” ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 ಕಿ.ಮೀ. ದೂರದಲ್ಲಿದ್ದು, ಇಲ್ಲಿಗೆ ಅನೇಕ ವಿದೇಶಿ ಪ್ರವಾಸಿಗರೂ ಕೂಡ ಆಗಮಿಸುತ್ತಾರೆ. ಜೀವಿತಾವಧಿಯಲ್ಲಿ ನೋಡಬೇಕಾದಂತಹ ಏಳು ಪವಿತ್ರ ಸ್ಥಳಗಳಲ್ಲಿ ಕಾಂಚೀಪುರಂ ಕೂಡಾ ಒಂದು. ಹಿಂದೂಗಳಿಗೆ ಇದು ಅತ್ಯಂತ ಪೂಜ್ಯ ನಗರವಾಗಿದೆ.
ಇಲ್ಲಿರುವ ಪ್ರಸಿದ್ಧ ಕಂಚಿ ಕಾಮಾಕ್ಷಿ ಅಮ್ಮನ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ. ಪಾರ್ವತೀ ದೇವಿಯ ಒಂದು ರೂಪವಾದ ಕಾಮಾಕ್ಷಿ ದೇವಾಲಯವನ್ನು ಪಲ್ಲವ ವಂಶದ ರಾಜರು ಆರನೇಯ ಶತಮಾನದಲ್ಲಿ ಕಟ್ಟಿದರೆಂಬ ವಾಡಿಕೆಯಿದೆ. ಇಲ್ಲಿನ ಕಾಮಾಕ್ಷಿ ಮೂರ್ತಿಯು ನಿಂತಿರುವ ಭಂಗಿಯಲ್ಲಿರದೇ, ಕುಳಿತಿರುವ ಭಂಗಿಯಲ್ಲಿದೆ. ದೇವಿಯು ಯೋಗಮುದ್ರೆಯಲ್ಲಿದ್ದು, ತುಂಬಾ ಶಾಂತ ಮತ್ತು ಗಂಭೀರ ವದನದಿಂದಿದ್ದಾಳೆ.
ಇಲ್ಲಿರುವ ಶಿವನ ಆಲಯವಾದ ಏಕಾಂಬರೇಶ್ವರ ದೇವಾಲಯವು ಕ್ರಿ.ಶ. 600ಕ್ಕೂ ಮೊದಲೇ ಕಟ್ಟಲ್ಪಟ್ಟಿರುವುದಾಗಿ ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ದೇಗುಲ ಶಿವನ ಐದು ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಹಾಗೆಯೇ ಇಲ್ಲಿರುವ ದೇವರಾಜಸ್ವಾಮಿ ದೇವಾಲಯವು ಪ್ರಾಚೀನ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.
ಕಾಚೀಪುರಂ ರೇಷ್ಮೇ ಸೀರೆಗಳಿಗೆ ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಬಂಗಾರದ ಜರಿಗಳಿಂದ ನೇಯ್ದ ರೇಷಿಮೆ ನೂಲಿನ ಸೀರೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಮಹಿಳೆಯರಿಗೆ ಪ್ರಿಯವಾಗಿದೆ. ಕಾಂಚೀಪುರಂಗೆ ಉತ್ತಮ ಸಾರಿಗೆ ಮತ್ತು ರೈಲು ಮಾರ್ಗದ ಸಂಪರ್ಕವಿದ್ದು, ಚೆನ್ನೈನಲ್ಲಿ ವಿಮಾನ ನಿಲ್ದಾಣವಿದೆ.