ಯವುದೇ ನಾಗರಿಕ ಸಮಾಜದ ಭಾಗವಾಗಿದ್ದರೂ ಸಹ ಸಾರ್ವಜನಿಕ ಪ್ರಜ್ಞೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರಲೇ ಬೇಕಾದ ಅತ್ಯಗತ್ಯ ವಿಚಾರವಾಗಿದೆ. ಸಂಚಾರೀ ನಿಯಮಗಳ ಪಾಲನೆಯಿಂದ ಹಿಡಿದು ನಮ್ಮ ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವವರೆಗೂ ನಮ್ಮ ಹೊಣೆಗಾರಿಗೆ ಬಹಳ ಮುಖ್ಯವಾದದ್ದು.
ಆಂಧ್ರ ಪ್ರದೇಶದ ರೇವು ಪಟ್ಟಣ ಕಾಕಿನಾಡ ಪಾಲಿಕೆ ಸಿಬ್ಬಂದಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹೊಸ ರೀತಿ ಕ್ರಮವೊಂದನ್ನು ತೆಗೆದುಕೊಳ್ಳುತ್ತಿದ್ದಾರೆ.
ಮನೆಯ ಕಸವನ್ನು ಪೌರ ಕಾರ್ಮಿಕರು ಸಂಗ್ರಹಿಸಲು ನೆರವಾಗುವಂತೆ ಡಂಪ್ ಮಾಡುವ ಬದಲು ತಂತಮ್ಮ ಮನೆಗಳ ಮುಂದೆಯೇ ಸುರಿಯುತ್ತಿದ್ದ ಪಟ್ಟಣದ ಜನತೆಗೆ ಸರಿಯಾದ ಪಾಠ ಕಲಿಸಲು ಪಾಲಿಕೆ ಸಿಬ್ಬಂದಿ ಮುಂದಾಗಿದ್ದಾರೆ.
ಕಸವನ್ನು ಪೌರ ಕಾರ್ಮಿಕರಿಗೆ ಕೊಡುವ ಬದಲು ಸಿಕ್ಕಸಿಕ್ಕಲ್ಲಿ ಹಾಕುವ ಮಂದಿಗೆ ಅದೇ ಕಸವನ್ನು ಅವರದ್ದೇ ಮನೆಗಳಿಗೆ ರವಾನೆ ಮಾಡಲು ಕಾಕಿನಾಡ ಮುನ್ಸಿಪಲ್ ಪಾಲಿಕೆಯ ಆಯುಕ್ತ ಸ್ವಪ್ನಿಲ್ ದಿನಕರ್ ಪುಂದ್ಕರ್ ಆದೇಶ ನೀಡಿದ್ದಾರೆ. ಕಸ ಸಂಗ್ರಹಣೆಗೆಂದೇ ಪಾಲಿಕೆಯು 900 ಮಂದಿಯನ್ನು ನೇಮಕ ಮಾಡಿದೆ.