ಕೊರೋನಾ ವೈರಸ್ ಸಾಂಕ್ರಮಿಕವು ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಕಾರಣದಿಂದ ಸಾರ್ವಜನಿಕರಿಗೆ ಅಗತ್ಯವಿಲ್ಲದೆ ಮನೆಗಳಿಂದ ಹೊರ ಬರದೇ ಇರಲು ಸರ್ಕಾರಗಳು ಎಚ್ಚರಿಕೆ ಕೊಡುತ್ತಲೇ ಇವೆ.
ಆದರೂ ಸಹ ಜನ ತಮಗೆ ಏನೂ ಆಗೇ ಇಲ್ಲವೆಂಬಂತೆ ಮುಖಕ್ಕೆ ಮಾಸ್ಕ್ ಸಹ ಧರಿಸದೇ ಮನಸೋಯಿಚ್ಛೆ ತಿರುಗಾಡುತ್ತಿದ್ದಾರೆ. ಇಂಥವರಿಂದ ಅಮಾಯಕರಿಗೂ ಸೋಂಕು ತಗುಲುವ ಭೀತಿ ಹೆಚ್ಚುತ್ತಿದೆ. ಇಂಥ ಮೂರ್ಖರನ್ನು ಅಣಕ ಮಾಡಿ, ಜಾಗೃತಿ ಮೂಡಿಸಲೆಂದು ಪತ್ರಕರ್ತರ ಬಳಗವೊಂದು ಕತ್ತೆಯ ಅಣುಕು ಸಂದರ್ಶನ ನಡೆಸಿದೆ.
38 ಸೆಕೆಂಡ್ ಗಳಷ್ಟಿರುವ ಈ ವಿಡಿಯೋ ಕ್ಲಿಪ್ ನಲ್ಲಿ ಪತ್ರಕರ್ತರು ಕತ್ತೆಯನ್ನು, “ಮಾಸ್ಕ್ ಧರಿಸದೇ ರಸ್ತೆ ಮೇಲೆ ಏಕೆ ಕುಳಿತಿರುವೆ ಸಹೋದರ? ಲಾಕ್‌ಡೌನ್ ಇದ್ದರೂ ನೀವು ಮನೆಯಿಂದ ಹೊರಬಂದು ಅಡ್ಡಾಡುತ್ತಿರುವಿರಿ. ನಿಮ್ಮನ್ನು ನೀವೇ ಸ್ಯಾನಿಟೈಸ್ ಮಾಡಿಕೊಳ್ಳುವಿರಾ?” ಎಂದು ಪ್ರಶ್ನಿಸಿದ್ದಾರೆ. ಆ ಕತ್ತೆ ತಾನೇ ಏನು ಉತ್ತರ ಕೊಟ್ಟೀತು ಹೇಳಿ? ಕತ್ತೆಯ ಮೇಲೆ ಅಲ್ಲೇ ಪಕ್ಕ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಪತ್ರಕರ್ತ ಕಂಪ್ಲೇನ್ ಮಾಡುತ್ತಾನೆ. ಬಳಿಕ, “ಈ ಕತ್ತೆಗಳು ಮಾಸ್ಕ್ ಧರಿಸದೇ ಆಚೆ ಎಲ್ಲೆಂದರಲ್ಲಿ ಓಡಾಡುತ್ತಿವೆ” ಎನ್ನುವ ಮೂಲಕ ಸರಿಯಾದ ಸರ್ಕಾಸ್ಟಿಕ್ ಪಂಚ್ ಒಂದನ್ನು ಕೊಟ್ಟಿದ್ದಾರೆ ಈ ವಿಡಿಯೋದಲ್ಲಿ.