ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ವಿದ್ಯಾರ್ಥಿನಿಯೊಬ್ಬರ ಶವವು ಜಾರ್ಖಂಡ್ನ ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆಯ ನೀರಿನಲ್ಲಿ ಕಂಡು ಬಂದಿದೆ. ಶವದ ಕೈ ಹಾಗೂ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗೊಡ್ಡಾ ಜಿಲ್ಲೆಯವರಾದ ಈ ವಿದ್ಯಾರ್ಥಿನಿ ಇಲ್ಲಿನ ಹಜಾರಿಬಾಗ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆಕೆಯ ಶವವನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ರಾಮಘಡ ಹಾಗೂ ಹಜಾರಿಬಾಗ್ ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದ್ದು, ಸಂಭವನೀಯ ಅತ್ಯಾಚಾರ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿರುವುದಾಗಿ ಡಿಐಜಿ ಎ.ವಿ ಓಂಕಾರ್ ತಿಳಿಸಿದ್ದಾರೆ.
ಜನಪ್ರಿಯ ಪಿಕ್ನಿಕ್ ತಾಣವಾದ ಈ ಅಣೆಕಟ್ಟೆಗೆ ಈ ವಿದ್ಯಾರ್ಥಿನಿ ತನ್ನ ಗೆಳೆಯರೊಂದಿಗೆ ಬಂದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಹಂತದ ತನಿಖೆ ವೇಳೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.