ಫೇಸ್ಬುಕ್ ಒಂದು ಸಾಮಾಜಿಕ ಜಾಲತಾಣದ ವೇದಿಕೆಯಾಗಿದ್ದು ನಮ್ಮ ಅಭಿಪ್ರಾಯಗಳನ್ನ ಶೇರ್ ಮಾಡೋಕೆ, ಮನರಂಜನೆಗೆ ಇದನ್ನ ಬಳಕೆ ಮಾಡಿಕೊಂಡ್ರೆ ಒಳ್ಳೆಯದು. ಆದರೆ ಇಲ್ಲೊಬ್ಬ ಯುವತಿ ಫೇಸ್ಬುಕ್ನಲ್ಲಿ ಲವ್ ಮಾಡೋಕೆ ಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ತಾನು ಪ್ರೀತಿಸಿದ ಯುವಕ ಒಬ್ಬ ಕ್ರಿಮಿನಲ್ ಎಂದು ತಿಳಿದ ಯುವತಿ ಶಾಕ್ ಆಗಿದ್ದಾಳೆ. ಅಭಿಷೇಕ್ ಠಾಕೂರ್ ಎಂಬ ಆರೋಪಿ ಜಾರ್ಖಂಡ್ನ ಗೊಡ್ಡಾ ಜಿಲ್ಲೆಯಲ್ಲಿ ಪ್ರಿಯತಮೆಯನ್ನ ಬೆದರಿಸಿ ಆಕೆಯಿಂದ ಹಣ ಹಾಗೂ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾನೆ. ಯುವತಿಯ ಹೇಳಿಕೆಯನ್ನ ಆಧರಿಸಿ ಪೊಲೀಸರು ಈತನನ್ನ ಬಂಧಿಸಿದ್ದಾರೆ.
ಅಂದಹಾಗೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗೋಕೆ ಕಾರಣ ಫೇಸ್ಬುಕ್ನ ಲೈಕ್ ರಿಯಾಕ್ಷನ್ ಅಂತೆ..! ಫೇಸ್ಬುಕ್ನಲ್ಲಿ ಶುರುವಾದ ಸಂಭಾಷಣೆ ಮೊಬೈಲ್ ಕಾಲ್ವರೆಗೂ ಹೋಗಿದೆ. ಜಾರ್ಖಂಡ್ ಮೂಲದ ಈ ಯುವತಿ ಮುಂಬೈನಲ್ಲಿ ಕೆಲಸಕ್ಕೆ ಸೇರಿದ್ದಳು. ಆಕೆಗಾಗಿ ಮುಂಬೈಗೆ ಬಂದಿದ್ದ ಯುವಕ, ಯುವತಿ ಜೊತೆ ಕೊನೆವರೆಗೂ ಜೊತೆ ಇರೋದಾಗಿ ಸುಳ್ಳು ಪ್ರತಿಜ್ಞೆ ನೀಡಿದ್ದ ಎನ್ನಲಾಗಿದೆ. ಈ ಮಧ್ಯೆ ಯುವತಿ ಈತನಿಗಾಗಿ ಬೈಕ್ನ್ನೂ ಕೊಡಿಸಿದ್ದಳಂತೆ.
ತನ್ನ ಕುಟುಂಬಕ್ಕೆ ನಿನ್ನ ಪರಿಚಯ ಮಾಡಿಸಿಕೊಡುತ್ತೇನೆ ಎಂದು ಸುಳ್ಳು ಹೇಳಿದ್ದ ಯುವಕ ಆಕೆಯನ್ನ ಪಾಟ್ನಾಗೆ ಕೊಂಡೊಯ್ದಿದ್ದ. ಆದರೆ ಗೊಡ್ಡಾ ತಲುಪುತ್ತಿದ್ದಂತೆ ಆತ ಮನೆಗೆ ಕರೆದುಕೊಂಡು ಹೋಗಲು ತಯಾರಿಲ್ಲ ಎಂಬ ವಿಚಾರ ಯುವತಿಯ ಗಮನಕ್ಕೆ ಬಂದಿದೆ.
ಈ ಬಗ್ಗೆ ಯುವತಿ ಪ್ರಶ್ನೆ ಮಾಡುತ್ತಿದ್ದಂತೆ ಆತ ಹಲ್ಲೆ ಮಾಡಲು ಯತ್ನಿಸಿದ್ದಾಣೆ. ಅಲ್ಲದೇ ಆಕೆಯ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಒಟ್ಟು 1.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಪೀಕಿ ಪರಾರಿಯಾಗಿದ್ದ ಎನ್ನಲಾಗಿದೆ.
ಯುವತಿ ನೀಡಿದ ದೂರನ್ನ ಆಧರಿಸಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದು ಹಣ ಹಾಗೂ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ.