ಉತ್ತರಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ.
ಘಟನೆಯ ದೃಶ್ಯಗಳನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೆ ಆಕೆಯಿಂದ 2000 ರೂಪಾಯಿ ದೋಚಿದ್ದಾರೆ. ಝಾನ್ಸಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಪ್ರಾಂತೀಯ ನಾಗರಿಕ ಸೇವೆಗಳ ಪರೀಕ್ಷೆ ನಡೆಯುತ್ತಿರುವ ಕ್ಯಾಂಪಸ್ ನಲ್ಲೇ ಘಟನೆ ನಡೆದಿದೆ.
17 ವರ್ಷದ ಸಂತ್ರಸ್ತೆ ಗೆಳೆಯನನ್ನು ಭೇಟಿಯಾಗಲು ಹೋಗಿದ್ದ ವೇಳೆಯಲ್ಲಿ 12 ಮಂದಿ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಆಕೆಯ ಸ್ನೇಹಿತನನ್ನು ಹೊಡೆದಿದ್ದಾರೆ. ಬಳಿಕ ವಿದ್ಯಾರ್ಥಿಯೊಬ್ಬ ಅತ್ಯಾಚಾರ ಎಸಗಿದ್ದು ಉಳಿದವರು ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಝಾನ್ಸಿ ಎಸ್.ಎಸ್.ಪಿ. ದಿನೇಶ್ ಕುಮಾರ್ ಪಿ. ತಿಳಿಸಿದ್ದಾರೆ.
ಆರೋಪಿತರು ಆಕೆಯಿಂದ 2 ಸಾವಿರ ರೂ. ದೋಚಿದ್ದು, ಕ್ಯಾಂಪಸ್ ಬಳಿ ಹಾದು ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿ ಸಿಪ್ರಿ ಬಜಾರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ವಿಚಾರಣೆ ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ವಿವಿಧ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಂಡು ರೋಹಿತ್ ಸೈನಿ ಮತ್ತು ಭರತ್ ಎಂಬುವರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.