ನವದೆಹಲಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಕೇರಳ ಜೆಡಿಎಸ್ ಘಟಕವನ್ನು ವಿಸರ್ಜಿಸಿದ್ದಾರೆ. ಕೇರಳ ಜೆಡಿಎಸ್ ಪಕ್ಷವನ್ನು ಅಧ್ಯಕ್ಷರು ದುರ್ಬಲಗೊಳಿಸುತ್ತಿರುವುದು ಕೇಳಿಬಂದ ಹಿನ್ನೆಲೆಯಲ್ಲಿ ಪಕ್ಷದ ಘಟಕವನ್ನು ವಿಸರ್ಜನೆ ಮಾಡಲಾಗಿದೆ.
ಇದೇ ವೇಳೆ ಪಕ್ಷವನ್ನು ಮುನ್ನಡೆಸಲು ಹೊಸ ತಾತ್ಕಾಲಿಕ ಸಮಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ದೇವೇಗೌಡರು ರಚಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಕುರಿತಂತೆ ವಿವರಣೆ ನೀಡಲು ನೀಡಲಾಗಿದ್ದ ನೋಟಿಸ್ ಗೆ ಕೇರಳ ಜೆಡಿಎಸ್ ಅಧ್ಯಕ್ಷ ಸಿ.ಕೆ. ನಾನು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಪಕ್ಷವನ್ನು ಅಸ್ಥಿರಗೊಳಿಸುವ ರೀತಿ ಅವರು ವರ್ತಿಸಿದ್ದಾರೆ ಎಂದು ಹೇಳಲಾಗಿದ್ದು, ಪಕ್ಷ ಸಂಘಟನೆಗಾಗಿ ಮತ್ತು ಪ್ರಮುಖ ತೀರ್ಮಾನ ಕೈಗೊಳ್ಳಲು ರಚಿಸಲಾಗಿದ್ದ ಕೋರ್ ಕಮಿಟಿಯನ್ನು ಕೂಡ ಅವರು ಸಂಪರ್ಕಿಸಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಜೆಡಿಎಸ್ ಘಟಕವನ್ನು ವಿಸರ್ಜನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಡ್ ಹಾಕ್ ಸಮಿತಿ ರಚಿಸಿದ್ದು, ಅಧ್ಯಕ್ಷರಾಗಿ ಮ್ಯಾಥ್ಯೂ ಟಿ. ಥಾಮಸ್ ಅವರನ್ನು ನೇಮಿಸಲಾಗಿದೆ.