ಪಾಕಿಸ್ತಾನ ಗಡಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಾನ್ ಮತ್ತು ಮಚಿಲ್ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳ ಬಳಿಕ ಅಲ್ಲಿನ ಸುಮಾರು 20 ಗ್ರಾಮಗಳು ಕನಿಷ್ಠ ಮೂಲ ಸೌಕರ್ಯ ಪಡೆದುಕೊಂಡಿವೆ.
ಕೆರಾನ್ ನ ಹಲವು ಗ್ರಾಮಗಳು ಈಗಾಗಲೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ 24×7 ವಿದ್ಯುತ್ ಸಂಪರ್ಕ ಪಡೆದಿವೆ. ಮಚಿಲ್ ನ 9 ಗ್ರಾಮಗಳಿಗೆ ಎರಡನೇ ಹಂತದ ವಿದ್ಯುತ್ ಸಂಪರ್ಕವನ್ನು ಈಗ ನೀಡಲಾಗಿದೆ. ಇನ್ನು ಒಂದು ವಾರದಲ್ಲಿ ಇತರ ಹಳ್ಳಿಗಳಿಗೂ ಕರೆಂಟ್ ಒದಗಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ವಿಭಾಗದ ಪ್ರಿನ್ಸಿಪಲ್ ಸೆಕ್ರೆಟರಿ ರೋಹಿತ್ ಕಾನ್ಸಾಲ್ ಹೇಳಿದ್ದಾರೆ.
ಇನ್ನೂ ಕೆಲವು ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಇದ್ದು, ಇನ್ನೊಂದು ವರ್ಷದಲ್ಲಿ ಎಲ್ಲ ಕಡೆಯೂ ವಿದ್ಯುತ್ ಗ್ರಿಡ್ ಮೂಲಕ 24×7 ಸಂಪರ್ಕ ಒದಗಿಸಲಾಗುವುದು ಎಂದು ಕುಪ್ವಾರಾ ಜಿಲ್ಲಾಧಿಕಾರಿ ಅಂಶೂಲ್ ತಿಳಿಸಿದ್ದಾರೆ. ಈ ಯೋಜನೆಯಿಂದ 25 ಸಾವಿರ ಜನರಿಗೆ ಪ್ರಯೋಜನವಾಗಲಿದೆ. ಇದುವರೆಗೆ ಈ ಭಾಗದಲ್ಲಿ ಡೀಸೆಲ್ ಜನರೇಟರ್ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು.