ಕೊರೋನಾ ಸೋಂಕಿಗೆ ದಾರಿ ಮಾಡಿಕೊಡದಿರಲು ದೇಶಾದ್ಯಂತ ಘೋಷಣೆಯಾಗಿದ್ದ ಲಾಕ್ ಡೌನ್ ಅವಧಿ ಹಲವರಿಗೆ ಹಲವು ರೀತಿಯ ಉಪಯೋಗ ಮಾಡಿಕೊಟ್ಟಿದೆ.
ಟಿಕ್ ಟಾಕ್ ಸೇರಿದಂತೆ ವಿವಿಧ ವೇದಿಕೆಯಲ್ಲಿ ಅನೇಕರು ಪ್ರತಿಭಾ ಪ್ರದರ್ಶನ ಮಾಡಿದರೆ, ಇನ್ನೂ ಕೆಲವರು ಮನೆಯವರೊಂದಿಗೆ ಕಾಲ ಕಳೆದರು. ಆಟೋಟಗಳನ್ನ ನಡೆಸಿದರು. ಅಡುಗೆ ಕಲೆ ಪ್ರದರ್ಶಿಸಿದವರೂ ಇದ್ದಾರೆ. ಹಲವರು ಕಲಿಕೆಗೆ ಒತ್ತು ಕೊಟ್ಟದ್ದೂ ಉಂಟು.
ಈ ಪೈಕಿ ಜೈಪುರ ಸಂಸದ ರಾಮಚರಣ್ ಬೋಹ್ರ ಹಾಗೂ ಅವರ ಇಡೀ ಕುಟುಂಬ ಸಂಸ್ಕೃತ ಭಾಷೆ ಕಲಿಯುವ ಮೂಲಕ ಲಾಕ್ ಡೌನ್ ಅವಧಿಯನ್ನು ಸಾರ್ಥಕ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಕುಳಿತು ಮಾಡುವುದಾದರೂ ಏನು ಎಂದು ಯೋಚಿಸುತ್ತಿರುವಾಗಲೇ ಸಂಸ್ಕೃತ ಕಲಿಯುವ ಆಸಕ್ತಿಯೂ ಹೊಳೆದಿದೆ.
ಕೊನೆಗೆ ಇಡೀ ಕುಟುಂಬವೇ ಜಗದ್ಗುರು ರಮಾನಂದಾಚಾರ್ಯ ರಾಜಸ್ತಾನ್ ಸಂಸ್ಕೃತ ವಿಶ್ವವಿದ್ಯಾಲಯ ತತ್ತ್ವಶಾಸ್ತ್ರ ವಿಭಾಗದ ಸಹಾಯಕ ಪ್ರಾಚಾರ್ಯರಾದ ಕೋಸಲೇಂದ್ರ ದಾಸರನ್ನು ಭೇಟಿ ಮಾಡಿದೆ. ಸಂಸ್ಕೃತ ಗುರುಗಳ ಮುಂದೆ ಬೇಡಿಕೆಯಿಟ್ಟು, ತಮ್ಮ ಆಸಕ್ತಿ ಅರಕೆ ಮಾಡಿಕೊಂಡಿದ್ದಾರೆ.
ಪ್ರತಿ ದಿನ ಸಂಜೆ ಕನಿಷ್ಠ 2 ಗಂಟೆಗಳ ಕಾಲ ಸಂಸ್ಕೃತ ಬೋಧನೆ ನಡೆದಿದ್ದು ಸಂಸದ ಬೋಹ್ರಾ ಮಾತ್ರವಲ್ಲದೆ, ಪತ್ನಿ ಲಲಿತಾ, ಮಗ – ಸೊಸೆ ಹಾಗೂ ಮೊಮ್ಮಕ್ಕಳೂ ಸಂಸ್ಕೃತ ಕಲಿಯುತ್ತಿದ್ದಾರೆ. ಐದು ವರ್ಷದ ಮೊಮ್ಮಗು ಸಂಸ್ಕೃತ ಶ್ಲೋಕ ಹೇಳುವುದನ್ನು ಕೇಳುವುದೇ ಖುಷಿ. ಹೀಗಾಗಿ ಕಲಿಕೆಯನ್ನು ತಿಂಗಳಾಂತ್ಯದವರೆಗೂ ಮುಂದುವರೆಸುವುದಾಗಿ ಸಂತಸ ಹಂಚಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಕೋಸಲೇಂದ್ರ ದಾಸ್ ಅವರೂ ಟ್ವಿಟ್ಟರ್ ಅಲ್ಲಿ ಪೋಸ್ಟ್ ಹಾಕಿದ್ದಾರೆ.