ಅತ್ಯಾಚಾರ ಪ್ರಕರಣದ ಅಡಿಯಲ್ಲಿ ಜೈಲು ಶಿಕ್ಷೆಯನ್ನ ಅನುಭವಿಸುತ್ತಿರುವ ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಕೊರೊನಾ ಸೋಂಕು ತಗುಲಿದೆ. ಇವರನ್ನ ರಾಜಸ್ಥಾನದ ಜೋಧಪುರ ಎಂಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಸಾರಾಂ ಸೇರಿದಂತೆ ಜೈಲಿನ 12 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಸಾರಾಂರನ್ನ ಎಂಡಿಎಂ ಆಸ್ಪತ್ರೆಯ ಐಸಿಯುವಿನಲ್ಲಿ ಇಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅಸಾರಾಂರನ್ನ ಜೋಧಪುರದ ಮಥುರಾ ದಾಸ್ ಮಾತುರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅತ್ಯಾಚಾರ ಪ್ರಕರಣದ ಅಡಿಯಲ್ಲಿ ಅಸರಾಂ ಜೋಧಪುರದ ಜೈಲಿನಲ್ಲಿ ಬಂಧಿಯಾಗಿದ್ದಾರೆ. ತಮ್ಮ ವಿರುದ್ಧ ಸಾಬೀತಾದ ಅತ್ಯಾಚಾರ ಶಿಕ್ಷೆಯನ್ನ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದರು.
16 ವರ್ಷದ ಯುವತಿ ಮೇಲೆ ಅತ್ಯಾಚಾರ ಸಾಬೀತಾದ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ ಕೋರ್ಟ್ ಶಿಕ್ಷೆ ಪ್ರಕಟಿಸಿತ್ತು. ಜೋಧಪುರ ಬಳಿಯ ಮನೈ ಆಶ್ರಮದಲ್ಲಿ 2013ರಲ್ಲಿ ಅಪ್ರಾಪ್ತೆ ಅಸಾರಾಮ್ ತನ್ನ ವಿರುದ್ಧ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪ ಮಾಡಿದ್ದಳು. ಬಳಿಕ ಅವರನ್ನ ಮಧ್ಯ ಪ್ರದೇಶದ ಇಂದೋರ್ನಲ್ಲಿ 2014ರಲ್ಲಿ ಬಂಧಿಸಲಾಗಿತ್ತು.
ಈ ಪ್ರಕರಣ ಸಂಬಂಧ ಸ್ವಯಂ ಘೋಷಿತ ದೇವಮಾನವ ಅಸಾರಾಂ ವಿರುದ್ಧ ಪೋಸ್ಕೋ ಕೇಸ್ ದಾಖಲು ಮಾಡಲಾಗಿತ್ತು. 2014ರಲ್ಲಿ ಅಸಾರಾಂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಮನವಿಯನ್ನ ತಿರಸ್ಕರಿಸಿತ್ತು. ಅಸಾರಾಂಗೆ ಏಪ್ರಿಲ್ 2018ರಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ಜೊತೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು.