ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾ ಮಾತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪಿತೃಪಕ್ಷದ ಕೊನೆಯ ಹಾಗೂ ದೇವಿಪಕ್ಷದ ಆರಂಭ ಕಾಲವಾದ ಮಹಾಲಯ ಅಮಾವಾಸ್ಯೆ ದಿನದಂದು ದುರ್ಗಾ ಮಾತೆಯನ್ನು ಬರ ಮಾಡಿಕೊಳ್ಳುವ ಸಂಪ್ರದಾಯವಿದೆ.
ಅಮಾವಾಸ್ಯೆಯ ನಂತರ ದುರ್ಗೆ, ಗಣಪತಿ, ಕಾರ್ತಿಕ, ಲಕ್ಷ್ಮೀ, ಸರಸ್ವತಿ ದೇವಿ ಕೈಲಾಸದಿಂದ ತವರುಮನೆಯಾದ ಭೂಮಿಗೆ ಬಂದಿಳಿಯುವ ನಂಬಿಕೆ ಇದೆ. ಹೀಗಾಗಿ ಮುಂದಿನ ದಿನಗಳನ್ನು ದೇವಿಪಕ್ಷ ಎಂದು ಪರಿಗಣಿಸಿ, ದೇವತೆಗಳನ್ನು ತವರುಮನೆಗೆ ಬರಮಾಡಿಕೊಳ್ಳುವ ಸಂಭ್ರಮ ಮನೆ ಮಾಡುತ್ತದೆ.
ಜೊತೆಗೆ ನಿದ್ರಾವಸ್ಥೆಯಲ್ಲಿರುವ ದೇವಿಯನ್ನು ಜಾಗೃತಾವಸ್ಥೆಗೆ ತರುವುದು ಎಂಬ ನಂಬಿಕೆಯೂ ಇದೆ. ಮಹಿಷಾಸುರ (ಕೆಟ್ಟತನ) ದಮನ ಮಾಡುವುದಕ್ಕಾಗಿ ಶಸ್ತ್ರಸಹಿತಳಾದ ದೇವಿಯ ಆರಾಧನೆಗೆ ಪ್ರಶಸ್ತ ಕಾಲವಿದು ಎಂಬುದು ನಂಬಿಕೆ.
ಈ ಎಲ್ಲ ಕಾರಣದಿಂದ ದೇವಿ ದುರ್ಗೆಯನ್ನು ಸ್ವಾಗತಿಸಲಾಗುತ್ತದೆ. ದ್ವಿಜೇನ್ ಮುಖೋಪಾಧ್ಯಾಯ ಅವರು ಹಾಡಿರುವ ಜಾಗೋ ದುರ್ಗಾ ಜಾಗೋ ಎಂಬ ಹಾಡು ಪಶ್ಚಿಮ ಬಂಗಾಳದ ಎಲ್ಲ ರೆಡಿಯೋ ವಾಹಿನಿಗಳಲ್ಲಿ ಮಹಾಲಯ ಅಮಾವಾಸ್ಯೆಯಂದು ಅನುರಣಿಸುತ್ತದೆ.
ಸಂಗೀತ, ಕಲೆಗಳಲ್ಲಿ ಅತೀವ ಆಸಕ್ತಿ ಹೊಂದಿರುವ ಸಿಎಂ ಮಮತಾ ಬ್ಯಾನರ್ಜಿ ಅವರು ಇದೇ ಹಾಡನ್ನು ಗುನುಗುನಿಸಿದ್ದಾರೆ. ಫೇಸ್ ಬುಕ್ ಖಾತೆಯಲ್ಲೂ ವೈರಲ್ ಆಗಿದೆ.
https://www.facebook.com/MamataBanerjeeOfficial/videos/324459978834124