ಮಂಗಳವಾರದಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ವಿಜಯ್ ಚೆನ್ನೈನ ನೀಲಂಕರೈ ನಲ್ಲಿರುವ ಮತಗಟ್ಟೆಗೆ ಸೈಕಲ್ ಮೂಲಕ ಆಗಮಿಸಿ ತಮ್ಮ ಮತ ಚಲಾಯಿಸಿದ್ದಾರೆ. ವಿಜಯ್ ಸೈಕಲ್ ನಲ್ಲಿ ಬರುವ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ವಾಹನಗಳ ಮೂಲಕ ಅವರನ್ನು ಹಿಂಬಾಲಿಸಿದ್ದಾರೆ.
ವಿಜಯ್ ಸೈಕಲ್ ನಲ್ಲಿ ಮತಗಟ್ಟೆಗೆ ಬಂದ ವಿಚಾರ ಕ್ಷಣಾರ್ಧದಲ್ಲಿ ಹರಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ವಿಜಯ್ ಈ ರೀತಿ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು.
ಆದರೆ ಬಳಿಕ ಈ ಕುರಿತು ವಿಜಯ್ ಅವರ ಪ್ರಚಾರ ತಂಡ ಸ್ಪಷ್ಟನೆ ನೀಡಿದ್ದು, ಮತಗಟ್ಟೆ ಸಮೀಪದಲ್ಲೇ ಇತ್ತು. ಹಾಗೂ ಕಾರಿನಲ್ಲಿ ತೆರಳಿದರೆ ಸಂಚಾರ ದಟ್ಟಣೆ ಹೆಚ್ಚಾಗಬಹುದು ಎಂಬ ಕಾರಣಕ್ಕೆ ವಿಜಯ್ ಅವರು ಮತಗಟ್ಟೆಗೆ ಸೈಕಲ್ ಮೂಲಕ ತೆರಳುವ ನಿರ್ಧಾರ ಕೈಗೊಂಡರು ಎಂದು ಹೇಳಿದೆ.