ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಇಂಡೋ ಟಿಬೇಟನ್ ಗಡಿ ಪೊಲೀಸ್ (ITBP) ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಭೂಕುಸಿತ ಆಗುತ್ತಿರುವ ಜಾಗದಲ್ಲೆಲ್ಲಾ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಜನರ ನೆರವಿಗೆ ಧಾವಿಸಿದ್ದಾರೆ.
ಇಲ್ಲಿನ ಪಿತೋಗರ್ ಜಿಲ್ಲೆಯ ಮುನ್‌ಸ್ಯಾರಿ ಪ್ರದೇಶದ ಲಾಪ್ಸಾ ಎಂಬ ಊರಿನಲ್ಲಿ ಗುಡ್ಡದ ಮೇಲೊಂದರಿಂದ ಬಿದ್ದು ಕಾಲು ಮುರಿದುಕೊಂಡಿದ್ದ ಮಹಿಳೆಯೊಬ್ಬರನ್ನು ITBP ಸಿಬ್ಬಂದಿ ಬಹಳ ಪ್ರಯಾಸದಿಂದ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ರೇಖಾ ದೇವಿ ಹೆಸರಿನ ಈ ಮಹಿಳೆಯನ್ನು ಭೂಕುಸಿತದ ಅವಶೇಷಗಳ ನಡುವಿನಿಂದ ಮೇಲೆತ್ತಿಕೊಂಡು, ಆಕೆಯನ್ನು ಸ್ಟ್ರೆಚರ್‌ನಲ್ಲಿ 15 ಗಂಟೆಗಳ ಕಾಲ ಹೊತ್ತೊಯ್ದು, ಆಸ್ಪತ್ರೆಗೆ ದಾಖಲು ಮಾಡುವಲ್ಲಿ ITBPಯ 14ನೇ ಬಟಾಲಿಯನ್‌ನ ಕಲಿಗಳು ಸಫಲರಾಗಿದ್ದಾರೆ.
ದುರ್ಗಮವಾದ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸಾಧ್ಯವಾಗದೇ ಇದ್ದ ಕಾರಣ, ಈ ಯೋಧರು ಆಕೆಯನ್ನು 40 ಕಿಮೀ ದೂರದವರೆಗೂ ಹೊತ್ತೊಯ್ಯಬೇಕಾಗಿ ಬಂದಿದೆ. ಈ ಹಾದಿಯಲ್ಲಿ ಸಾಕಷ್ಟು ನದಿ, ತೊರೆಗಳು ತುಂಬಿ ಹರಿಯುತ್ತಿದ್ದರೂ ಸಹ ಅದಕ್ಕೆ ಕೇರ್ ಮಾಡದ ಈ ಸಿಬ್ಬಂದಿ, ಕೊನೆಗೂ ಆ ಮಹಿಳೆಗೆ ಮರು ಜೀವ ನೀಡಲು ಸಫಲರಾಗಿದ್ದಾರೆ.