ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಪ್ರಸ್ತುತ 5ನೇ ಹಂತದ ಲಾಕ್ ಡೌನ್ ಮುಂದುವರೆದಿದೆ. ಜೂನ್ 30ಕ್ಕೆ ಇದು ಅಂತ್ಯಗೊಳ್ಳಲಿದ್ದು, ಇದರ ಮಧ್ಯೆ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಕಾರಣ ಜೂನ್ 15ರಿಂದ ಮತ್ತೊಮ್ಮೆ ಕಟ್ಟುನಿಟ್ಟಾದ ಕಂಪ್ಲೀಟ್ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅದರಲ್ಲೂ ಜೀ ನ್ಯೂಸ್ ಹೆಸರಿನಲ್ಲಿ ಈ ವದಂತಿ ಹರಿದಾಡುತ್ತಿದ್ದು, ಕೇಂದ್ರ ಗೃಹ ಮಂತ್ರಾಲಯದ ಮೂಲದಿಂದಲೇ ಮಾಹಿತಿ ದೊರಕಿದೆ ಎಂದು ಇದರಲ್ಲಿ ತಿಳಿಸಲಾಗಿದೆ. ಆದರೆ ಈ ಕುರಿತು ಜೀ ನ್ಯೂಸ್ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಸುದ್ದಿಯನ್ನು ನಾವು ಪ್ರಸಾರ ಮಾಡಿಲ್ಲ ಎಂದು ತಿಳಿಸಿದೆ.
ಜೊತೆಗೆ ಜೂನ್ 15ರಿಂದ ಮತ್ತೊಮ್ಮೆ ಕಟ್ಟುನಿಟ್ಟಾದ ಕಂಪ್ಲೀಟ್ ಲಾಕ್ಡೌನ್ ಜಾರಿಗೊಳ್ಳಲಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಕೇಂದ್ರ ಗೃಹ ಸಚಿವಾಲಯ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲವೆಂದು ತಿಳಿಸಲಾಗಿದೆ. ಬೇಕೆಂದೇ ಕೆಲವರು ಈ ರೀತಿ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಜೀ ನ್ಯೂಸ್ ಹೆಸರಿನಲ್ಲಿ ಜೂನ್ 15ರಂದು ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸ್ಕ್ರೀನ್ ಶಾಟ್ ತಪ್ಪು ಮಾಹಿತಿಯಿಂದ ಕೂಡಿದ್ದು, ಸಾರ್ವಜನಿಕರಲ್ಲಿ ಗೊಂದಲ ಹುಟ್ಟಿಸುವ ಸಲುವಾಗಿ ಕೆಲವರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.