
ಗೊರಕೆ ಹೊಡೆಯುತ್ತಾನೆ ಎಂದು ಮಗನೇ ತನ್ನ ಅಪ್ಪನನ್ನು ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯಲ್ಲಿ ನಡೆದಿದೆ.
ಸೆರಮಾವು ಉತ್ತರ ಪೊಲೀಸ್ ಠಾಣೆಯ ವ್ಯಾಪ್ತಿಯ ಸೌಧಾ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಮಸ್ವರೂಪ್(65) ಕೊಲೆಯಾದವರು. ಅವರು ಪತ್ನಿ ಹಾಗೂ ತಮ್ಮ ಇಬ್ಬರು ಪುತ್ರರಾದ ನವೀನ್ ಹಾಗೂ ಮುಖೇಶ್ ಜೊತೆ ವಾಸಿಸುತ್ತಿದ್ದರು.
ಘಟನೆ ನಡೆದ ದಿನ ಸಣ್ಣ ಮಗ ಮುಖೇಶ್ ಜತೆ ರಾಮಸ್ವರೂಪ್ ಅವರ ಪತ್ನಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹಿರಿಯ ಮಗ ನವೀನ್ ಈ ಹೀನ ಕೃತ್ಯ ಮಾಡಿದ್ದಾನೆ. ಈ ಹಿಂದೆಯೂ ಆತ ತಂದೆಯ ಜತೆ ಮಾರಾಮಾರಿಗೆ ಇಳಿದಿದ್ದ ಎಂಬುದು ಸ್ಥಳೀಯರ ಆರೋಪ.
ರಾತ್ರಿ ಇಬ್ಬರೇ ಇರುವಾಗ ತಂದೆಯ ಗೊರಕೆಯಿಂದ ಕಿರಿಕಿರಿಯಾಗುತ್ತದೆ ಎಂದು ನವೀನ್ ತನ್ನ ತಂದೆಗೆ ಪ್ರಜ್ಞೆ ತಪ್ಪುವವರೆಗೂ ಕೋಲಿನಿಂದ ಹೊಡೆದಿದ್ದ. ವಿಷಯ ತಿಳಿದ ಸಣ್ಣ ಮಗ ಮುಖೇಶ್ ಸ್ಥಳಕ್ಕೆ ಆಗಮಿಸಿ ತಂದೆಯನ್ನು ಆಸ್ಪತ್ರೆಗೆ ಸೇರಿಸಿದ್ದ. ಆದರೆ, ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ಘೋಷಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದು, ನವೀನ್‌ನನ್ನು ಬಂಧಿಸಲಾಗಿದೆ ಎಂದು ಪಿಲಿಬಿತ್ ಜಿಲ್ಲೆಯ ಎಸ್‌ಪಿ ಪ್ರಕಾಶ್ ತಿಳಿಸಿದ್ದಾರೆ.