ಪ್ರತಿ ವರ್ಷದ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ. ಈ ಮೂಲಕ ಘನತೆಯೇ ಮೈವೆತ್ತ ಈ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ.
ಇಂಥ ದಿನದ ಪ್ರಯುಕ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಂದೀಪ್ ತ್ರಿಪಾಠಿ, ಬಂಧನದಲ್ಲಿದ್ದ ಗಂಡು ಹುಲಿಯ ಪ್ರೇಮಪಾಶಕ್ಕೆ ಬಿದ್ದ ಹೆಣ್ಣು ಹುಲಿಯೊಂದು ತನ್ನ ಸ್ವಾತಂತ್ರ‍್ಯವನ್ನೇ ತ್ಯಾಗ ಮಾಡಿ, ತನ್ನ ಪ್ರಿಯಕರನೊಂದಿಗೆ ಸಂಸಾರ ಮಾಡಲು ಬಂದ ಕಥೆಯನ್ನು ಟ್ವೀಟ್ ಮಾಡಿದ್ದಾರೆ. ಒಡಿಶಾದ ನಂಕಂಡನ್‌ನಲ್ಲಿ ಓಪನ್ ಏರ್ ಮೃಗಾಲಯವೊಂದರಲ್ಲಿ ಇದ್ದ ಪ್ರದೀಪ ಎಂಬ ಗಂಡು ಹುಲಿ ಮಾಡಿದ ಮೋಡಿಗೆ ಬಿದ್ದ ಕನನ್ ಎಂಬ ಹೆಣ್ಣು ಹುಲಿ, ತನ್ನ ಕಾಡನ್ನೇ ಬಿಟ್ಟು ಪ್ರದೀಪ ಇದ್ದ ಕಡೆಗೆ ಓಡಿ ಬಂದಿದ್ದಾಳೆ. ಈ ಘಟನೆ 1967ರಲ್ಲಿ ನಡೆದಿದೆ.
ಆದರೆ ಅದಾಗಲೇ ಶಿಖಾ ಎಂಬ ಪ್ರೇಯಸಿಯೊಂದಿಗೆ ಫಿಕ್ಸ್ ಆಗಿದ್ದ ಪ್ರದೀಪ್, ಕನನ್ ಳ ಪ್ರೇಮಾಂಕುರದಲ್ಲಿ ಬೀಳಲು ನಿರಾಕರಿಸಿದ್ದಾನೆ. ಆದರೂ ಸಹ ಬೇರೊಂದು ಗಂಡು ಹುಲಿಯ ಮೋಹಪಾಶಕ್ಕೆ ಬೀಳದ ಕನನ್, 21ರ ಜುಲೈ 1978ರಲ್ಲಿ ಪ್ರಾಣ ಬಿಡುವವರೆಗೂ ಏಕಾಂಗಿಯಾಗಿಯೇ ಬದುಕು ಸವೆಸಿದ್ದಾಳೆ. ಇಂಥ ತ್ಯಾಗಮಯಿ ಹುಲಿಯ ಹೆಸರಿನಲ್ಲೇ ಆ ಮೃಗಾಲಯದ ಜಾಗವೊಂದನ್ನು ’ಕನನ್ ಸ್ಕ್ವೇರ್’ ಎಂದು ಹೆಸರಿಡಲಾಗಿದೆ.