ಕೋವಿಡ್-19 ಸೋಂಕಿನ ಕಾಟದಿಂದ ಹೊರಬರಲು ದೇಶವೇ ಹೋರಾಡುತ್ತಿರುವ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲೆಡೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಿವೆ. ಸಾರ್ವಜನಿಕರಿಗೆ ಎಲ್ಲೇ ಹೋದರೂ ಸಹ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಡಳಿತಗಳು ಸಲಹೆ ಕೊಡುತ್ತಲೇ ಬಂದಿವೆ.
ಈ ನಿಯಮಾವಳಿಗಳ ಉಲ್ಲಂಘನೆ ಮಾಡಿದವರಿಗೆ ಸಾಂಕ್ರಮಿಕ ರೋಗಗಳ ಕಾಯಿದೆಯ ಸೆಕ್ಷನ್ 3ರ ಪ್ರಕಾರ ದಂಡ ಹಾಗೂ ಜುಲ್ಮಾನೆ ವಿಧಿಸುವ ಸಾಧ್ಯತೆ ಇದೆ. ಇಷ್ಟೆಲ್ಲಾ ಇದ್ದರೂ ಸಹ ಸಮಾಜದ ಅನೇಕ ವರ್ತುಲಗಳಲ್ಲಿ ಈ ಎಲ್ಲಾ ಕ್ರಮಗಳಿಂದ ಜನರಿಗೆ ವಿನಾಕಾರಣ ಕಿರಿಕಿರಿ ಆಗುತ್ತಿದ್ದು, ಕೋವಿಡ್-19 ತಡೆಗಟ್ಟಲು ಇವೆಲ್ಲಾ ಏನೂ ಪ್ರಯೋಜನಕ್ಕೆ ಬಾರದು ಎನ್ನುವ ಅಭಿಪ್ರಾಯ ನೆಲೆಸಿದೆ.
ಅಮೆರಿಕದಲ್ಲಿ ಆಗುತ್ತಿರುವಂತೆ, ಭಾರತದಲ್ಲೂ ಸಹ ಮಾಸ್ಕ್ ವಿರೋಧಿ ಹಾಗೂ ಹಾಗೂ ಚುಚ್ಚುಮದ್ದು ವಿರೋಧಿ ಪ್ರತಿಭಟನೆಗಳು ದನಿ ಪಡೆದುಕೊಳ್ಳುತ್ತಿದ್ದು, ಅನೇಕ ನಗರಗಳಲ್ಲಿ ಈ ಸಂಬಂಧ ಪ್ರತಿಭಟನೆಗಳನ್ನೂ ಮಾಡಲಾಗುತ್ತಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಮುಂಬೈನ ಮರೀನ್ ಡ್ರೈವ್ ಪ್ರದೇಶದಲ್ಲಿ ಮಾಸ್ಕ್ ಹಾಗೂ ಚುಚ್ಚುಮದ್ದುಗಳನ್ನು ಕಡ್ಡಾಯ ಮಾಡಿರುವುದರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.
ಮಾಸ್ಕ್‌ಗಳನ್ನು ಧರಿಸುವುದರಿಂದ ಸುಮ್ಮನೇ ಕಿರಿಕಿರಿಯಾಗುವುದಲ್ಲದೇ, ಸೋಂಕಿನ ನಿಯಂತ್ರಣ 100 ಪ್ರತಿಶತ ಸಾಧ್ಯ ಎಂಬ ಕುರಿತಂತೆ ಯಾವುದೇ ಸಾಕ್ಷ್ಯಗಳು ಪೂರ್ಣವಾಗಿ ಸ್ಥಾಪಿಸಲ್ಪಟ್ಟಿಲ್ಲ ಎಂಬ ವಿಚಾರವನ್ನು ಮುಂದಿಡುತ್ತಿವೆ ಈ ಗುಂಪುಗಳು.