ಅನಾರೋಗ್ಯಕ್ಕೆ ತುತ್ತಾಗಿದ್ದ ತಾಯಿಯನ್ನು ಸ್ಕೂಟಿಯಲ್ಲಿ 300 ಕಿ.ಮೀ. ದೂರದ ತವರಿಗೆ ಬಿಟ್ಟುಬಂದು, 12ನೇ ತರಗತಿ ಪರೀಕ್ಷೆ ಬರೆದು ಶೇ.87 ರಷ್ಟು ಅಂಕ ಗಳಿಸಿರುವ ಮಗಳ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಮುಖ್ಯಮಂತ್ರಿಗಳ ಲ್ಯಾಪ್ ಟಾಪ್ ಯೋಜನೆಗೆ ಆಯ್ಕೆಯಾಗಿದ್ದು, 25 ಸಾವಿರ ರೂ. ಪ್ರೋತ್ಸಾಹಧನವೂ ಸಿಗಲಿದೆ.
ಮಹಾರಾಷ್ಟ್ರದ ಇಂದೋರ್ ನಲ್ಲಿರುವ ಶುಭಾಂಗಿ ಪಾಟೀಲ್, 2009 ರಲ್ಲಿ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ತಂದೆಯನ್ನು ಕಳೆದುಕೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆ ಆಗಿದ್ದ ತಾಯಿ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿ ಶುಭಾಂಗಿಯು 12 ನೇ ತರಗತಿ ಬೋರ್ಡ್ ಪರೀಕ್ಷೆ ಎದುರಿಸಬೇಕಿತ್ತು. ಇದೇ ಸಂದರ್ಭದಲ್ಲಿ ತಾಯಿಯ ಆರೋಗ್ಯವೂ ದಿನೇ ದಿನೇ ಹದಗೆಡುತ್ತಿತ್ತು.
ದಿಕ್ಕು ತೋಚದಂತಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಚೋಪ್ಡದಲ್ಲಿದ್ದ ತಾಯಿಯ ತವರುಮನೆಗೆ ಬಿಡುವ ಯೋಚನೆ ಮಾಡಿದರು. ಆದರೆ, ಅಷ್ಟು ದೂರ ಹೋಗಲು ಯಾವುದೇ ವ್ಯವಸ್ಥೆಯಿಲ್ಲದೆ, ಸ್ಕೂಟಿಯಲ್ಲೇ 300 ಕಿ.ಮೀ. ಕರೆದೊಯ್ದು ಬಿಟ್ಟುಬಂದು ಪರೀಕ್ಷೆ ಬರೆದಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿಯೇ ತಾಯಿ ಕೊನೆಯುಸಿರೆಳೆದರು. ಈಗ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಶೇ.87 ರಷ್ಟು ಅಂಕ ಗಳಿಸಿ, ಸಿಎಂ ಲ್ಯಾಪ್ ಟಾಪ್ ಯೋಜನೆಯಡಿ 25 ಸಾವಿರ ರೂ. ಪ್ರೋತ್ಸಾಹಧನ ಸಿಕ್ಕಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಣ ಬಳಸಿಕೊಳ್ಳುವುದಾಗಿ ಶುಭಾಂಗಿ ಹೇಳಿದ್ದಾರೆ.