ಸ್ಮಾರ್ಟ್ ಫೋನ್ ಅನ್ನೋದು ಜನರಿಗೆ ಒಂದು ರೀತಿಯ ಚಟವಾಗಿಬಿಟ್ಟಿದೆ. ದಿನದ 24 ಗಂಟೆಯೂ ಮೊಬೈಲ್ ಜೊತೆಗಿರಲೇಬೇಕು. ಸ್ಮಾರ್ಟ್ ಫೋನ್ ಬಳಕೆದಾರರು ಯಾವ ರೀತಿ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ ಅನ್ನೋ ಬಗ್ಗೆ ಸೈಬರ್ ಭದ್ರತಾ ಸಂಸ್ಥೆಯೊಂದು ಸಮೀಕ್ಷೆ ನಡೆಸಿತ್ತು.
ಪ್ರತಿನಿತ್ಯ ಸ್ಮಾರ್ಟ್ ಫೋನ್ ಬಳಸುವ 1504 ಭಾರತೀಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯಲ್ಲಿ ಬಹಿರಂಗವಾಗಿರೋ ಅಂಕಿ-ಅಂಶಗಳು ಮಾತ್ರ ನಿಜಕ್ಕೂ ಆಘಾತಕಾರಿಯಾಗಿತ್ತು. ಶೇ.80 ರಷ್ಟು ಮಂದಿ ಹಾಲಿಡೇಗೆ ಅಂತ ಹೋದಾಗಲೂ ಮೊಬೈಲ್ ಜೊತೆಗಿಟ್ಟುಕೊಳ್ತಾರೆ.
ಕುಟುಂಬದವರು, ಸ್ನೇಹಿತರ ಜೊತೆಗೆ ಸಂಪರ್ಕದಲ್ಲಿರಲು ಅದು ಬೇಕೇ ಬೇಕು ಎಂದಿದ್ದರು. ಪ್ರಯಾಣದ ಸಂದರ್ಭದಲ್ಲಿ ತಮ್ಮ ಮಕ್ಕಳಿಗೆ ಇಂಟರ್ನೆಟ್ ಸೌಲಭ್ಯವಿರುವ ಮೊಬೈಲ್ ಬಳಸಲು ಶೇ.68 ರಷ್ಟು ಪೋಷಕರು ಅನುವು ಮಾಡಿಕೊಡ್ತಿದ್ದರಂತೆ. ಹಾಲಿಡೇ ಸಮಯದಲ್ಲೂ ಶೇ.60 ಕ್ಕಿಂತ್ಲೂ ಹೆಚ್ಚು ಭಾರತೀಯರು ದಿನಕ್ಕೆ ಕನಿಷ್ಟ ಒಂದು ಗಂಟೆಯಾದ್ರೂ ಸ್ಮಾರ್ಟ್ ಫೋನ್ ಬಳಸ್ತಾರೆ.
ಇಂತಹ ಡಿವೈಸ್ ಗಳಿಂದ ಅಥವಾ ಮೊಬೈಲ್ ನಿಂದ ದೂರವಿದ್ರೆ ಶೇ.57 ರಷ್ಟು ಭಾರತೀಯರು ಆತಂಕಕ್ಕೆ ಒಳಗಾಗುತ್ತಾರಂತೆ. ಪ್ರತಿನಿತ್ಯ ಇಮೇಲ್ ಚೆಕ್ ಮಾಡದೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಶೇ.52 ರಷ್ಟು ಮಂದಿ. ಶೇ.30ರಷ್ಟು ಜನರು ದಿನವಿಡೀ ಆಗಾಗ ಇಮೇಲ್ ಚೆಕ್ ಮಾಡ್ತಿದ್ದಾರೆ.
ಸಮಾಧಾನಕರ ಸಂಗತಿ ಅಂದ್ರೆ ಶೇ.70ರಷ್ಟು ಜನರು ಹಾಲಿಡೇಗೆ ತೆರಳುವಾಗ ತಮ್ಮ ಲ್ಯಾಪ್ಟಾಪ್ ಅನ್ನು ಜೊತೆಗೆ ಕೊಂಡೊಯ್ಯುವುದಿಲ್ಲ. ಕೇವಲ ಶೇ.40ರಷ್ಟು ಜನರು ಮಾತ್ರ ತಮ್ಮ ಸ್ಮಾರ್ಟ್ ಫೋನ್ ನಿಂದ ದೂರವಿರಲು ಇಚ್ಛಿಸುತ್ತಿದ್ದಾರೆ. ಈ ವಿವರಗಳು ಪೋಷಕರಲ್ಲಿ ಆತಂಕ ಹುಟ್ಟಿಸಿರೋದಂತೂ ಸುಳ್ಳಲ್ಲ.