
ಲಡಾಖ್ ಪ್ರದೇಶದಲ್ಲಿ ಭಾರತ-ಚೀನಾಗಳ ನಡುವೆ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ದೇಶದಲ್ಲಿ ಚೀನಾ ವಿರೋಧಿ ಅಲೆ ಜೋರಾಗಿದೆ. ಚೀನೀ ಉತ್ಪನ್ನಗಳು ಹಾಗೂ ಸೇವೆಗಳನ್ನು ತ್ಯಜಿಸಬೇಕೆಂಬ ಕೂಗಿಗೆ ದೇಶವಾಸಿಗಳು ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ.
ಇವೆಲ್ಲದರ ನಡುವೆ ಕೇಂದ್ರ ಸಚಿವ ರಾಮ್‌ದಾಸ್ ಅಠವಾಳೆ, ಚೈನೀಸ್ ಖಾದ್ಯಗಳನ್ನೂ ಬ್ಯಾನ್ ಮಾಡಬೇಕೆಂದು ಕೋರಿದ್ದಾರೆ. ಖಾದ್ಯಗಳು ಚೈನಾ ಮೂಲದ್ದದಾದರೂ ಸಹ ಅವುಗಳನ್ನು ಉಣಬಡಿಸುತ್ತಿರುವ ರೆಸ್ಟೋರೆಂಟ್‌ಗಳು ಭಾರತೀಯರದ್ದಾಗಿದೆ. ಇವು ಅನೇಕರಿಗೆ ಉದ್ಯೋಗಾವಕಾಶ ನೀಡುತ್ತಿದ್ದು, ಇಂಥ ವಿಚಾರಗಳಲ್ಲಿ ಸಚಿವರು ಸಂಯಮದಿಂದ ಮಾತನಾಡಬೇಕೆಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸಚಿವರ ಈ ಹೇಳಿಕೆಗಳ ಬೆನ್ನಿಗೇ ಭಾರತೀಯರು ಚೀನೀ ಖಾದ್ಯಗಳಾದ ನೂಡಲ್ಸ್, ಗೋಬಿ ಮಂಚೂರಿಗಳ ಉಗಮ ಸ್ಥಾನಗಳ ಕುರಿತಂತೆ ಸರ್ಚ್ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಈ ಮುನ್ನ ಅಠವಾಳೆಯವರು, ಕೊರೋನಾ ವೈರಸ್‌ಗೆ “Go Corona Go” ಕೂಗು ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಲೇ ಸದ್ದು ಮಾಡಿದ್ದರು.