ಗಲ್ವಾನ್ ಕಣಿವೆಯ ಗದ್ದಲ ಮುಗಿದು ಮೂರು ದಿನಗಳಾದ ಬಳಿಕ ಚೀನಾ ವಿರುದ್ಧ ಭಾರತೀಯರಿಗೆ ಆಕ್ರೋಶ ಮುಗಿಲುಮುಟ್ಟಿದ್ದು, ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಹಿಂದೆಂದಿಗಿಂತಲೂ ಜೋರಾಗಿದೆ.
#HindiCheeniByeBye ಹ್ಯಾಶ್ ಟ್ಯಾಗ್ ಟ್ವಿಟರ್ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಚೀನೀ ಆಪ್ಗಳನ್ನು ಮೊಬೈಲ್ ಗಳಿಂದ ಕಿತ್ತೊಗೆದು, ಅವುಗಳ ಕುರಿತಾಗಿ ನೆಗೆಟಿವ್ ರಿವ್ಯೂಗಳನ್ನು ಬರೆಯುತ್ತಿದ್ದಾರೆ ಮಂದಿ. ಶೇರ್ ಇಟ್, ಪಬ್ಜೀ ಸೇರಿದಂತೆ ಅನೇಕ ಜನಪ್ರಿಯ ಚೀನೀ ಆಪ್ಗಳನ್ನು ದೇಶವಾಸಿಗಳು ತಮ್ಮ ಮೊಬೈಲ್ ಗಳಿಂದ ಅನ್ಇನ್ಸ್ಟಾಲ್ ಮಾಡುತ್ತಿದ್ದಾರೆ.
ವಿಡಿಯೋ ಶೇರಿಂಗ್ ಕಿರುತಂತ್ರಾಂಶ ಟಿಕ್ ಟಾಕ್ ಹಾಗೂ ಯು.ಸಿ.ಬ್ರೌಸರ್ಗಳ ಮೇಲಂತೂ ವಿಪರೀತ ಸಿಟ್ಟನ್ನು ಕಾರಿಕೊಂಡಿದ್ದಾರೆ ಭಾರತೀಯರು. ಗೂಗಲ್ ಪ್ಲೇ ಸ್ಟೋರ್ನಲ್ಲಿ ಭಾರತೀಯರಿಂದ ಈ ಆಪ್ಗಳ ಕುರಿತಾಗಿ ಒಂದಷ್ಟು ನೆಗೆಟಿವ್ ಪ್ರತಿಕ್ರಿಯೆಗಳು ಬರತೊಡಗಿವೆ. ಇಷ್ಟೆಲ್ಲಾ ಆದರೂ ಸಹ, ಈ ಕಿರುತಂತ್ರಾಂಶಗಳ ಒಟ್ಟಾರೆ ರೇಟಿಂಗ್ ನಲ್ಲೇನೂ ಅಂಥ ಬದಲಾವಣೆಗಳು ಕಂಡುಬಂದಿಲ್ಲ.